ನವದೆಹಲಿ,ಜೂ.11- ಭದ್ರಾವತಿ ಕಬ್ಬಿಣ ಉಕ್ಕಿನ ಕಾರ್ಖಾನೆ ಸೇರಿದಂತೆ ರಾಷ್ಟ್ರದ ಉಕ್ಕಿನ ಕಾರ್ಖಾನೆಗಳ ಪುನಶ್ಚೇತನದ ಬಗ್ಗೆ ಸಮಗ್ರ ವರದಿ ನೀಡುವಂತೆ ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ.
ಅಧಿಕಾರ ಸ್ವೀಕಾರ ಮಾಡುವ ಮುನ್ನ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸದಲ್ಲಿ ಉಕ್ಕು ಸಚಿವಾಲಯದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಭದ್ರಾವತಿ ಕಬ್ಬಿಣ್ಣ ಮತ್ತು ಉಕ್ಕಿನ ಕಾರ್ಖಾನೆಯ ಪುನಶ್ಚೇತನದ ಬಗ್ಗೆ ಚರ್ಚೆ ನಡೆಸಿದರು. ಕಾರ್ಖಾನೆಗಳ ಪುನಶ್ಚೇತನದ ಸಾಧ್ಯಸಾಧ್ಯತೆಗಳು, ಪುನಶ್ಚೇತನಕ್ಕಿರುವ ಅವಕಾಶಗಳ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ನಿರ್ದೇಶನ ನೀಡಿದರು.
ಕರ್ನಾಟಕದ ಕುದುರೆಮುಖದಲ್ಲಿ ಸಿಗುತ್ತಿದ್ದ ಕಬ್ಬಿಣದ ಅದಿರು ಜಗತ್ತಿನಲ್ಲೇ ಶ್ರೇಷ್ಠ ಗುಣಮಟ್ಟದ ಅದಿರಾಗಿತ್ತು ಎಂದು ಹೇಳುವ ಮೂಲಕ ಬೆಂಗಳೂರಿನಲ್ಲಿ ಉಕ್ಕು ಸಂಶೋಧನಾ ಕೇಂದ್ರ ಸ್ಥಾಪನೆಯ ಬಗ್ಗೆ ಅಧಿಕಾರಿಗಳು ಸಚಿವರ ಗಮನ ಸೆಳೆದರು. ಉಕ್ಕಿನ ಸಂಶೋಧನೆಗೆ ಮತ್ತು ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟರೆ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ ಎಂಬ ನಿಟ್ಟಿನಲ್ಲಿ ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ತಾವು ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗಾಗಿ ಮಾಡಿದ್ದ ಕೆಲಸಗಳ ಮಾಹಿತಿಯನ್ನು ನೀಡಿ ಕಾಂಪಿಟ್ ವಿತ್ ಚೀನಾ ಪರಿಕಲ್ಪನೆಯ ಬಗ್ಗೆ ವಿವರಿಸಿದರು.
ಇದು ಅಧಿಕಾರಿಗಳ ಮೆಚ್ಚುಗೆಗೂ ಪಾತ್ರವಾಯಿತು. ದೇಶದ ಎಲ್ಲಾ ರಾಜ್ಯಗಳ ಕೈಗಾರಿಕಾಭಿವೃದ್ದಿ ತಮ ಗುರಿಯಾಗಿದ್ದು, ಪ್ರಧಾನಿ ನರೇಂದ್ರಮೋದಿಯವರ ಮೇಕಿನ್ ಇಂಡಿಯಾ ಪರಿಕಲ್ಪನೆಯಡಿ ಉತ್ಪಾದನೆ ಹೆಚ್ಚಳ, ಉದ್ಯೋಗ ಸೃಷ್ಟಿ, ಭಾರತವನ್ನು ವಿಶ್ವದ ಮೂರನೇ ಆರ್ಥಿಕ ಶಕ್ತಿ ಮಾಡುವ ಗುರಿಗೆ ತಲುಪಲು ಎಲ್ಲರೂ ಸಾಥ್ ನೀಡೋಣ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಪುನಶ್ಚೇತನಗೊಳಿಸಲು ಅವಕಾಶ ಇರುವ ಕೈಗಾರಿಕೆಗಳನ್ನು ಮಾತ್ರ ಅಭಿವೃದ್ಧಿಪಡಿಸೋಣ. ವಿನಾಕಾರಣ ಜನರ ತೆರಿಗೆ ಹಣ ಪೋಲು ಮಾಡುವುದು ಬೇಡ. ಪ್ರಧಾನಿಯವರು ಬಹಳ ವಿಶ್ವಾಸವಿಟ್ಟು ಮಹತ್ವದ ಈ ಖಾತೆಯನ್ನು ನೀಡಿದ್ದಾರೆ. ಅವರ ನಿರೀಕ್ಷೆ ಹುಸಿಯಾಗಬಾರದೆಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಭಾರತೀಯ ಉಕ್ಕು ಪ್ರಾಧಿಕಾರದ ಅಧ್ಯಕ್ಷ ಅಮರಿಂದು ಪ್ರಕಾಶ್ ಅವರು ಬಿಲಾಯ್ ಸೇರಿ ಇತರೆ ಉಕ್ಕು ತಯಾರಿಕಾ ಘಟಕಗಳಿಗೆ ಭೇಟಿ ನೀಡುವಂತೆ ಕೋರಿದರು. ಸಭೆಯಲ್ಲಿ ಉಕ್ಕು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸುಕೃತಿ ಲಿಖಿ, ಜಂಟಿ ಕಾರ್ಯದರ್ಶಿ ವಿನೋದ್‌ಕುಮಾರ್ ತ್ರಿಪಾಠಿ, ಆರ್ಥಿಕ ಸಲಹೆಗಾರ ಅಶ್ವಿನ್‌ಕುಮಾರ್, ಉಪಕಾರ್ಯದರ್ಶಿ ಸುಭಾಷ್‌ಕುಮಾರ್ ಪಾಲ್ಗೊಂಡಿದ್ದರು.