ಬೆಂಗಳೂರು,ಜೂ.11– ಪ್ರಧಾನಿ ನರೇಂದ್ರಮೋದಿ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಆರೋಗ್ಯ ವಿಚಾರಿಸದ್ದಾರೆ. ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲಿ ದೇವೇಗೌಡರು ಅನಾರೋಗ್ಯದ ಹಿನ್ನಲೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.
ಅನಾರೋಗ್ಯದಿಂದಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. 3ನೇ ಬಾರಿಗೆ ಪ್ರಧಾನಿಯಾಗಿರುವುದಕ್ಕೆ ಶುಭ ಕೋರಿ ದೇವೇಗೌಡರು ಪತ್ರ ಬರೆದಿದ್ದರು.
ಇದರ ಬೆನ್ನಲ್ಲೇ ಪ್ರಧಾನಿಯವರು ದೇವೇಗೌಡರಿಗೆ ಕರೆ ಮಾಡಿ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ. ಈ ವಿಚಾರವನ್ನು ಗೌಡರು ಎಕ್‌್ಸನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಧಾನಿಯವರು ನನ್ನ ಆರೋಗ್ಯದ ಬಗ್ಗೆ ವಹಿಸಿರುವ ಕಾಳಜಿಗೆ ಅಭಾರಿಯಾಗಿದ್ದೇನೆ. ಅವರ ಈ ಕಾಳಜಿ ನನ್ನನ್ನು ಭಾವುಕರನ್ನಾಗಿಸಿದೆ ಎಂದಿದ್ದಾರೆ.
ಕರೆ ಮಾಡಿದ ಸಂದರ್ಭದಲ್ಲಿ ಹೊಸ ಸರ್ಕಾರದ ಆಡಳಿತ ವೈಖರಿ, ಆಲೋಚನೆ, ಚಿಂತನೆಗಳ ಬಗ್ಗೆಯೂ ವಿಚಾರ ವಿನಿಮಯ ಮಾಡಿಕೊಂಡರು ಎಂದು ಹೇಳಿರುವ ಗೌಡರು, ಭಾರತವನ್ನು ಮತ್ತಷ್ಟು ಹೆಚ್ಚಿನ ಕೀರ್ತಿಗೆ ಮೋದಿಯವರು ಕೊಂಡಯ್ಯಲಿ. ಭಗವಂತನ ಆಶೀರ್ವಾದ ಸದಾ ಅವರ ಮೇಲಿರಲಿ ಎಂದು ಹಾರೈಸಿದ್ದಾರೆ.