ಬೆಂಗಳೂರು,ಜೂ.12- ಚಿತ್ರದುರ್ಗದ ರೇಣುಕಾ ಸ್ವಾಮಿಯ ಹತ್ಯೆಯಲ್ಲಿ ಯಾರ ಪಾತ್ರ ಏನೆಂಬುದರ ಬಗ್ಗೆ ವಿಜಯನಗರ ಉಪವಿಭಾಗದ ಪೊಲೀಸರು ದರ್ಶನ್ ಆ್ಯಂಡ್ ಗ್ಯಾಂಗ್‌ನ ವಿಚಾರಣೆ ನಡೆಸುತ್ತಿದ್ದಾರೆ.
ರೇಣುಕಾಸ್ವಾಮಿಗೆ ಯಾವ ವಿಷಯ ಹೇಳಿ ಚಿತ್ರದುರ್ಗದಿಂದ, ಯಾವ ವಾಹನದಲ್ಲಿ ಕರೆತರಲಾಯಿತು, ಯಾರು ಅವರನ್ನು ಕರೆದುಕೊಂಡು ಬರಲು ಹೇಳಿದರು, ಅವರನ್ನು ಯಾರು ಕರೆತಂದರು, ಬೆಂಗಳೂರಿಗೆ ಕರೆದುಕೊಂಡು ಬಂದು ಎಲ್ಲಿ ಇಡಲಾಗಿತ್ತು. ಅವರ ಮೇಲೆ ಯಾವ ಯಾವ ಆಯುಧಗಳಿಂದ ಯಾರ್ಯಾರು ಹೊಡೆದರು ಎಂಬ ಮಾಹಿತಿಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ.
ರೇಣುಕಾಸ್ವಾಮಿ ಮೃತಪಟ್ಟ ನಂತರ ಯಾವ ವಾಹನದಲ್ಲಿ ತೆಗೆದುಕೊಂಡು ಹೋಗಿ ಸುಮನಹಳ್ಳಿಯ ಮೋರಿಗೆ ಹಾಕಿದ್ದೀರಿ? ಆ ವೇಳೆ ಯಾರ್ಯಾರು ಇದ್ದರು ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಆರೋಪಿಗಳಿಂದ ಬಾಯ್ಬಿಡಿಸುತ್ತಿದ್ದಾರೆ.
ಈ ಪ್ರಕರಣದಲ್ಲಿ ಇದುವರೆಗೂ ಪವಿತ್ರ ಗೌಡ, ದರ್ಶನ್ ಸೇರಿ 13 ಮಂದಿಯನ್ನು ಬಂಧಿಸಲಾಗಿದೆ. ನಿನ್ನೆ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ, ನ್ಯಾಯಾಲಯ 6 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ.
ಸ್ಥಳ ಮಹಜರು:
ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಅಪರಿಹರಿಸಿಕೊಂಡು ಬಂದು ಕೊಲೆ ಮಾಡಿದ ನಂತರ ಶವ ಬಿಸಾಡಲಾಗಿದ್ದ ಸ್ಥಳಕ್ಕೆ ಇಂದು ಪೊಲೀಸರು ಕೆಲವು ಆರೋಪಿಗಳನ್ನು ಕರೆತಂದು ಸ್ಥಳ ಮಹಜರು ನಡೆಸಿದರು. ಆ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ರೇಣುಕಾಸ್ವಾಮಿಯನ್ನು ಕರೆದೊಯ್ದು ಕೂಡಿಹಾಕಿ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲಾದ ಪಟ್ಟಣಗೆರೆಯ ಶೆಡ್‌ನಲ್ಲೂ ಪೊಲೀಸರು ಸ್ಥಳ ಮಹಜರು ನಡೆಸಿದರು. ಆ ಸಂದರ್ಭದಲ್ಲಿ ಎಫ್‌ಎಸ್‌ಎಲ್ ಅಧಿಕಾರಿಗಳು ಸ್ಥಳದಲ್ಲಿದ್ದರು.