ಬೆಂಗಳೂರು, ಜೂ.17- ಇಂಧನ ಬೆಲೆ ಏರಿಕೆ ವಿಷಯದಲ್ಲಿ ಸುಳ್ಳಿನ ಸರಮಾಲೆ/ತಪ್ಪು ಮಾಹಿತಿಯನ್ನು ಬಿತ್ತರಿಸುವುದು ಕಾಂಗ್ರೆಸ್ ಪಕ್ಷದ ಕಪಟ ನಾಟಕವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ತಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಜನರಿಗೆ ಗ್ಯಾರಂಟಿ ನೀಡಲು ಈ ರೀತಿಯಾದ ದರ ಏರಿಕೆ ಅನಿವಾರ್ಯ ಎಂದು ರಾಜ್ಯ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.
ಮುಂದುವರೆದು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪೆಟ್ರೋಲ್/ಡೀಸೆಲ್ ದರ ಕಡಿಮೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ ಅಂಡಮಾನ್ ದ್ವೀಪದಲ್ಲಿ ಪೆಟ್ರೋಲ್ ದರ ಅತ್ಯಂತ ಕಡಿಮೆ ಇದೆ ಹಾಗೂ ಆಂಧ್ರ ಮತ್ತು ತೆಲಂಗಾಣದಲ್ಲಿ ಅತ್ಯಂತ ಹೆಚ್ಚಾಗಿದೆ.
ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕೇಂದ್ರ ಸರ್ಕಾರ ವಿಧಿಸುವ ಅಬಕಾರಿ ಸುಂಕ ರೂ.19.90 (ಪ್ರತಿ ಲೀಟರ್ ಮೇಲೆ) ಆಗಿದೆ, ಅದೇ ಕಾಂಗ್ರೆಸ್ ಸರ್ಕಾರದ 24.17 (ಪ್ರತಿ ಲೀಟರ್) ಆಗಿದೆ. ಪೆಟ್ರೋಲ್ ಮೇಲೆ ರಾಜ್ಯ ಸರ್ಕಾರ ಹಾಕುವ ಕೇಂದ್ರ ಸರ್ಕಾರದ ಎಕ್ಸೈಸ್ ಡ್ಯೂಟಿಗಿಂತ ಹೆಚ್ಚಾಗಿದೆ.
ಇಂದು ತಮ್ಮ ಬಿಟ್ಟಿ ಭಾಗ್ಯಗಳಿಗೆ ಹಣವನ್ನು ಹೊಂದಿಸಲು ಪೆಟ್ರೋಲ್ ಮೇಲಿನ ಹೆಚ್ಚಳ ಮಾಡಿರುವ ಕಾಂಗ್ರೆಸ್ ಸರ್ಕಾರ 2022ರಲ್ಲಿ ಹಾಗೂ 2000 ಇಸವಿಯಲ್ಲಿ ಏರುತ್ತಿರುವ ಇಂಧನ ದರಗಳ ಮೇಲೆ ಸ್ಪೀಕ್ ಅಪ್ ಇಂಡಿಯಾ ಎಂಬ ಬೃಹತ್ ಚಳುವಳಿಯನ್ನು ಕೇಂದ್ರ ಸರ್ಕಾರದ ವಿರುದ್ಧ ಹಮಿಕೊಂಡಿತ್ತು.
ಅಸಲೀಗೆ 2000 ಹಾಗೂ 2022ರಲ್ಲಿ ಕೋವಿಡ್ ಸೇರಿದಂತೆ, ರಶಿಯಾ-ಯುಕ್ರೇನ್ ಬಿಕ್ಕಟಿನಿಂದ ಇಂಧನ ಮೇಲಿನ ಆಮದು ಬೆಲೆ ಹೆಚ್ಚಾಗಿದ್ದರಿಂದ ಕೇಂದ್ರ ಸರ್ಕಾರ ಅನಿವಾರ್ಯವಾಗಿ ಇಂಧನ ಬೆಲೆ ಹೆಚ್ಚಿಸಬೇಕಾಗಿತ್ತು ಹೊರತು ಬಡವರಿಗೆ, ಮಾಧ್ಯಮ ವರ್ಗದವರಿಗೆ ಅನಾವಶ್ಯಕವಾಗಿ ಹೊರೆ ಹಾಕಲು ಅಲ್ಲ. ಹೊಣೆಗೇಡಿತನಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್ ಎಂದು ಅವರು ಕಿಡಿಕಾರಿದ್ದಾರೆ.