ಬೆಂಗಳೂರು,ಜೂ.21- ನೊಯ್ಡಾದಲ್ಲಿ ಪತ್ರಕರ್ತ ಮತ್ತು ಯೂಟ್ಯೂಬರ್ ಅಜೀತ್ ಭಾರ್ತಿ ಅವರನ್ನು ಬಂಧಿಸಲು ಬೆಂಗಳೂರು ಪೊಲೀಸರು ಯತ್ನಿಸಿದ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ. ಅಯೋಧ್ಯೆಯ ರಾಮ ಮಂದಿರ ವಿಚಾರವಾಗಿ ಸುಳ್ಳು ಸುದ್ದಿ ಹಂಚುತ್ತಿದ್ದ ಆರೋಪ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ರಾಜ್ಯ ಪೊಲೀಸರು ಇತ್ತೀಚೆಗೆ ಬೆಂಗಳೂರಿನಲ್ಲಿ ಅಜೀತ್ ಭಾರ್ತಿ ವಿರುದ್ಧ ಪ್ರಕರಣ ದಾಖಲಿಸಿದ್ದು, ತನ್ನ ನಿವಾಸಕ್ಕೆ ಬಂದ ಕರ್ನಾಟಕ ಪೊಲೀಸರನ್ನು ನೋಯ್ಡಾ ಪೊಲೀಸರು ತಮ್ಮ ಜತೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ಯೂಟ್ಯೂಬರ್ನ ಮನೆಯ ಹೊರಗೆ ಕರ್ನಾಟಕ ಪೊಲೀಸರು ಮತ್ತು ನೋಯ್ಡಾ ಪೊಲೀಸರ ನಡುವೆ ಮುಖಾಮುಖಿಯಾಗಿದೆ. ಕರ್ನಾಟಕ ಪೊಲೀಸರನ್ನು ತನ್ನ ಮನೆಗೆ ಪ್ರವೇಶಿಸಲು ಅವರು ಅನುಮತಿಸಲಿಲ್ಲ ಎಂದು ಭಾರ್ತಿ ಹೇಳಿದ್ದು, ನೋಯ್ಡಾ ಪೊಲೀಸರು ಸಮಯಕ್ಕೆ ಮಧ್ಯಪ್ರವೇಶಿಸಿ ಕ್ರಮ ಕೈಗೊಂಡರು ಎಂದು ಹೇಳಲಾಗುತ್ತಿದೆ. ಅದೇ ವೇಳೆ ಪತ್ರಕರ್ತ, ಫ್ಯಾಕ್ಟ್ ಚೆಕರ್ ಮೊಹಮ್ಮದ್ ಜುಬೇರ್ ವಿರುದ್ಧ ಪ್ರಕರಣ ದಾಖಲಿಸುವುದಾಗಿಯೂ ಯೂಟ್ಯೂಬರ್ ತನ್ನ ಕಾಮೆಂಟ್‌ನಲ್ಲಿ ಹೇಳಿದ್ದಾರೆ.
ಈ ಬೆಳವಣಿಗೆ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ.ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ವಿಲಕ್ಷಣ ಕಾರಣಗಳಿಗಾಗಿ ಅಜೀತ್ ಭಾರ್ತಿ ಅವರನ್ನು ಬಂಧಿಸುವ ಪ್ರಯತ್ನವು ಸಂಪೂರ್ಣವಾಗಿ ಸರ್ವಾಧಿಕಾರಿಯಾದದ್ದು. ಬಿಜೆಪಿ ಅಜೀತ್ ಭಾರ್ತಿ ಅವರೊಂದಿಗೆ ದೃಢವಾಗಿ ನಿಲ್ಲುತ್ತದೆ ಮತ್ತು ಈ ಪ್ರಕರಣದ ವಿರುದ್ಧ ಹೋರಾಡಲು ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಈ ಘಟನೆಯು ಪ್ರಸ್ತುತ ಆಡಳಿತದ ಆಡಳಿತ ವೈಫಲ್ಯಕ್ಕೆ ಉದಾಹರಣೆಯಾಗಿದೆ, ರಾಜ್ಯದಲ್ಲಿ ಕಾನೂನು ಸುವ್‌ಯವಸ್ಥೆ ಕುಸಿದಿದೆ. ರಾಜ್ಯದಲ್ಲಿ ಹೈ-ಪ್ರೊಫೈಲ್ ಕೊಲೆಗಳು, ಮಹಿಳೆಯರಿಗೆ ಕಿರುಕುಳ ಸೇರಿದಂತೆ ಅಪರಾಧ ಚಟುವಟಿಕೆಗಳಲ್ಲಿ ಗಣನೀಯ ಏರಿಕೆ ಕಂಡಿದೆ. ಆದರೆ, ಇದನ್ನು ಸರ್ಕಾರ ನಿರ್ಲಕ್ಷಿಸಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದರೂ ಪೊಲೀಸ್ ಪಡೆಯ ಅಮೂಲ್ಯ ಸಮಯ ಮತ್ತು ಸಂಪನೂಲಗಳನ್ನು ಸಾರ್ವಜನಿಕರ ಸುರಕ್ಷತೆಯ ಬದಲಿಗೆ ರಾಜಕೀಯ ಸೇಡಿಗೆ ಬಳಸಿಕೊಳ್ಳಲಾಗುತ್ತಿದೆ.
ಸಿದ್ದರಾಮಯ್ಯ ಸರ್ಕಾರ ತನ್ನ ನಾಗರಿಕರ ಕಲ್ಯಾಣ ಮತ್ತು ಭದ್ರತೆಯನ್ನು ಖಾತ್ರಿಪಡಿಸುವುದಕ್ಕಿಂತ ತನ್ನ ಟೀಕಾಕಾರರನ್ನು ಹತ್ತಿಕ್ಕುವತ್ತ ಹೆಚ್ಚು ಗಮನಹರಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.ಬಿಜೆಪಿಯು ಭಾರ್ತಿ ಅವರನ್ನು ರಕ್ಷಿಸಲು ಪಣ ತೊಟ್ಟಿದೆ. ರಾಜ್ಯದ ಸರ್ವಾಧಿಕಾರಿ ಆಡಳಿತದ ವಿರುದ್ಧ ಹೋರಾಟವನ್ನು ಮುಂದುವರೆಸಲಿದೆ ಎಂದು ಹೇಳಿದ್ದಾರೆ.
ಈ ನಡುವೆ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಹೈಗ್ರೌಂಡ್ಸ್ ಪೊಲೀಸರು, ಅಜೀತ್ ಭಾರ್ತಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದೇವೆಯೇ ಹೊರತು ಬಂಧಿಸಿಲ್ಲ ಎಂದು ಹೇಳಿದ್ದಾರೆ.