ಬೆಂಗಳೂರು,ಜೂ.21- ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ನಾಲ್ವರ ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ನಟ ದರ್ಶನ್, ಧನ್ರಾಜ್, ವಿನಯ್, ಪ್ರದೂಶ್ ಈ ನಾಲ್ವರನ್ನು ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ನಿನ್ನೆ ನ್ಯಾಯಾಲಯದ ಮೂಲಕ ಕಸ್ಟಡಿಗೆ ಪಡೆಯಲಾಗಿದ್ದು, ಇಂದು ಆರೋಪಿಗಳ ವಿಚಾರಣೆಯನ್ನು ಪೊಲೀಸರು ಮಾಡುತ್ತಿದ್ದಾರೆ.
ನಾಲ್ವರು ಆರೋಪಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ದರ್ಶನ್ ಅವರನ್ನು ವಿಚಾರಣೆಗೊಳಪಡಿಸಿದ ಪೊಲೀಸರು ಅವರ ಮನೆಯಿಂದ ವಶಪಡಿಸಿಕೊಂಡ 37 ಲಕ್ಷ ರೂ.ನಗದು ಹಾಗೂ ಆರೋಪಿಯ ತನ್ನ ಪತ್ನಿಗೆ ನೀಡಿದ್ದ 3 ಲಕ್ಷ ರೂ.ಗಳ ಹಣದ ಮೂಲದ ಬಗ್ಗೆ ಪ್ರಶ್ನಿಸಿದ್ದಾರೆ.
ಈ ಹಣ ತಮಗೆ ಎಲ್ಲಿಂದ ಬಂತು? ಯಾರು ಕೊಟ್ಟಿದ್ದರು? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಮಾಹಿತಿ ಕಲೆ ಹಾಕಿದ್ದಾರೆ. ರೇಣುಕಾಸ್ವಾಮಿ ಹತ್ಯೆಯ ನಂತರ ಎಲ್ಲಿಗೆ ಹೋಗಿದ್ದೀರಿ? ಯಾರ್ಯಾರಿಗೆ ಫೋನ್ ಮಾಡಿದ್ದೀರಿ? ಪ್ರಕರಣ ಮುಚ್ಚಿ ಹಾಕಲು ಮಾಡಿದ ಪ್ರಯತ್ನವೇನು? ಯಾರ ಮೇಲೆ ಒತ್ತಡ ಹೇರಿದ್ದೀರೀ ಎಂದು ಸರಣಿ ಪ್ರಶ್ನೆಗಳನ್ನು ಕೇಳಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.
ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡಲು ಬಳಸಲಾದ ಮೆಗ್ಗರ್ ಸಾಧನ ಎಲ್ಲಿಂದ ಖರೀದಿ ಮಾಡಲಾಗಿತ್ತು ಎಂದು ಆರೋಪಿ ಧನರಾಜ್ ಅವರಿಂದ ಮಾಹಿತಿ ಸಂಗ್ರಹಿಸುತ್ತಿರುವ ಪೊಲೀಸರು ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಹತ್ಯೆಗೀಡಾದ ರೇಣುಕಾಸ್ವಾಮಿ ಮೊಬೈಲ್ ಹಾಗೂ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕರೆತಂದ ಆರೋಪಿ ರಾಘವೇಂದ್ರ ಮೊಬೈಲ್ನ್ನು ರಾಜಕಾಲುವೆಗೆ ಎಸೆಯಲಾಗಿದ್ದು, ಅವುಗಳಿಗಾಗಿ ಶೋಧ ನಡೆಸಿದರೂ ಸಿಕ್ಕಿಲ್ಲ. ಅವುಗಳನ್ನು ಎಲ್ಲಿ ಎಸೆಯಲಾಗಿದೆ ಎಂಬ ಬಗ್ಗೆ ಆರೋಪಿ ಪ್ರದೂಷ್ನಿಂದ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.