ಬೆಂಗಳೂರು,ಸೆ.25- ಕನ್ನಡಪರ ಸಂಘಟನೆಗಳ ನಡುವೆಯೇ ಗೊಂದಲಕ್ಕೆ ಕಾರಣವಾಗಿದ್ದ ಕರ್ನಾಟಕ ಬಂದ್ ಇದೇ 29ರಂದು ನಡೆಯುವುದು ಖಚಿತವಾಗಿದ್ದು, ಒಂದೇ ವಾರದಲ್ಲಿ ಎರಡೆರಡು ಬಂದ್ ಎದುರಿಸುವ ಪರಿಸ್ಥಿತಿ ಎದುರಾಗಿದೆ. ಮಂಗಳವಾರ ಕರ್ನಾಟಕ ಕಬ್ಬು ಬೆಳೆಗಾರರ ಸಂಘ ಹಾಗೂ ಜಲಶಕ್ತಿ ಸಂರಕ್ಷಣಾ ಸಮಿತಿ ಬೆಂಗಳೂರು ಬಂದ್‍ಗೆ ಕರೆ ಕೊಟ್ಟಿರುವ ಬೆನ್ನಲ್ಲೇ ಕನ್ನಡಪರ ಸಂಘಟನೆಗಳು ಇದೇ 29ರಂದು ಕರ್ನಾಟಕ ಬಂದ್‍ಗೂ ಕರೆ ಕೊಟ್ಟಿವೆ.
ಕನ್ನಡ ಚಳುವಳಿ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ಹಾಗೂ ಕನ್ನಡ ಒಕ್ಕೂಟ ಮುಖಂಡರ ನೇತೃತ್ವದಲ್ಲಿ ಸಭೆ ನಡೆಸಿ 29ರಂದು ಕರೆ ನೀಡಿರುವ ಕರ್ನಾಟಕ ಬಂದ್ ಹಿಂತೆಗೆದುಕೊಳ್ಳಬಾರದು ಎಂಬ ಒಮ್ಮತದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ನಾಳೆ ನಡೆಯಲಿರುವ ಬೆಂಗಳೂರು ಬಂದ್‍ಗೆ ನಮ್ಮ ಬೆಂಬಲವಿಲ್ಲ. ಸೆ.29ಕ್ಕೆ ಅಖಂಡ ಕರ್ನಾಟಕ ಬಂದ್ ಮಾಡುತ್ತೇವೆ. ರಾಜಭವನವನ್ನು ಮುತ್ತಿಗೆ ಹಾಕುತ್ತೇವೆ ಎಂದು ಘೋಷಣೆ ಮಾಡಿದರು. ಶುಕ್ರವಾರ ನಡೆಯುವ ಅಖಂಡ ಕರ್ನಾಟಕ ಬಂದ್ ಸೇರಿದಂತೆ ರಾಜ್ಯಾದ್ಯಂತ ಭಾರೀ ಚಳವಳಿ ನಡೆಸುವ ಬಗ್ಗೆ ಕನ್ನಡ ಒಕ್ಕೂಟದ ಆಶ್ರಯದಲ್ಲಿ ನಡೆದ ಕನ್ನಡಪರ ಸಂಘಟನೆಗಳ ಮಹತ್ತರವಾದ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಿದರು.
ರಾಹುಲ್ ಗಾಂಧಿಗೆ ಹೈದರಾಬಾದ್‍ನಲ್ಲಿ ಸ್ಪರ್ಧಿಸುವಂತೆ ಓವೈಸಿ ಚಾಲೆಂಜ್
ಬಂದ್ ಎಂದರೆ ಕನ್ನಡ ಒಕ್ಕೂಟ, ಎಲ್ಲಾ ಕನ್ನಡ ಪರ ಸಂಘಟನೆಗಳು ಸೆ.29ಕ್ಕೆ ಬಂದ್ ನಡೆಸಲು ತೀರ್ಮಾನಿಸಿರುವ ಸಂದರ್ಭದಲ್ಲಿ ಇದನ್ನು ತಿಳಿದು ಆಮ್ ಆದ್ವಿ ಪಕ್ಷ ಮತ್ತು ರೈತ ಸಂಘಟನೆಯೊಂದು ನಾಳೆ ಬೆಂಗಳೂರು ಬಂದ್ ಕರೆಕೊಟ್ಟು ರಾಜಕೀಯ ಮಾಡುತ್ತಿವೆ. ನಾವೆಲ್ಲಾ ಸಂಘಟನೆಗಳು ನಾಳೆ ಬಂದ್ ಬೇಡ ಎಂದು ಕೈ ಮುಗಿದು ಕೇಳಿಕೊಂಡರು ಅವರು ಒಪ್ಪಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೇವಲ ಬೆಂಗಳೂರು ಮಾತ್ರ ಕರ್ನಾಟಕವಲ್ಲ ಅಖಂಡ ಕರ್ನಾಟಕ ಸೇರಿ ಕರ್ನಾಟಕವಾಗಿದೆ. ಆದ್ದರಿಂದ ನಮ್ಮ ಕೂಗು, ದೇಶದ ಪ್ರಧಾನಿಗಳಿಗೆ ಮುಟ್ಟಬೇಕು ದೆಹಲಿಯಲ್ಲಿ ನಮ್ಮ ಹೋರಾಟದ ಕಿಚ್ಚು ಹೆಚ್ಚಾಗಬೇಕು ಎಂದರು. ರಾಜ್ಯದ ಸುಮಾರು 12 -16 ಸಂಘಟನೆಗಳು ನಮಗೆ ಬೆಂಬಲ ನೀಡವೆ. ಇದೇ 29ರಂದು ಕರೆ ಕೊಟ್ಟಿರುವ ಅಖಂಡ ಕರ್ನಾಟಕ ಬಂಧಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಅಂದು ಮಲ್ಟಿಪ್ಲೆಕ್ಸ್ ಮತ್ತು ಚಿತ್ರಮಂದಿರಗಳಲ್ಲಿ ಯಾವುದೇ ಚಲನಚಿತ್ರಗಳು ಪ್ರದರ್ಶನವಾಗುವುದಿಲ್ಲ ಹಾಗೆಯೇ ರಾಷ್ಟ್ರೀಯ ಹೆದ್ದಾರಿಗಳು ಕೂಡ ಬಂದ್ ಆಗಲಿದ್ದು, ಕೆಂಪೇಗೌಡ ವಿಮಾನ ನಿಲ್ದಾಣದಲ್ಲೂ ಬಂದ್ ಮಾಡಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ಡಾಕ್ಟರ್ ರಾಜಕುಮಾರ್ ಅಭಿಮಾನಿಗಳ ಸಂಘ ಅಧ್ಯಕ್ಷ ಸಾರಾ ಗೋವಿಂದ್ ಮಾತನಾಡಿ, ಕುಡಿಯು ನೀರಿಗೆ ಮೇಕೆದಾಟು ಅಣೆಕಟ್ಟು ಕಟ್ಟಲು ತೊಂದರೆ ಕೊಡುತ್ತಿರುವ ತಮಿಳು ನಾಡಿಗೆ ಕಾವೇರಿ ನೀರಿನ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇವತ್ತು ಅಧಿಕಾರದಲ್ಲಿ ಇಲ್ಲದೇ ಇರುವವರು ಹೋರಾಟಕ್ಕೆ ಬೆಂಬಲ ಕೊಡುತ್ತೇವೆಂದು ಹೇಳುತ್ತಿದ್ದಾರೆ. ಇವರು ಅಧಿಕಾರದಲ್ಲಿದ್ದಾಗ ನೀರನ್ನು ತಮಿಳುನಾಡಿಗೆ ನೀರು ಹರಿಸಿ ದ್ರೋಹವೆಸಗಿದ್ದಾರೆ ಅವರಿಗೆ ಮಾತನಾಡುವ ಹಕ್ಕಿಲ್ಲ. ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಕನ್ನಡಪರ ಸಂಘಟನೆಗಳಿಗೆ ಮಾತ್ರ ನೈತಿಕ ಹಕ್ಕಿದೆ ಎಂದು ಪರೋಕ್ಷವಾಗಿ ಬಿಜೆಪಿ ಪಕ್ಷವನ್ನು ದೂರಿದರು. ಅಷ್ಟೇ ಅಲ್ಲದೆ ನಾಳೆ ನಡೆಯುವ ಬಂದ್ ಗೆ ಬೆಂಬಲವಾಗಿ ನಿಂತಿರುವ ಆಮ್ ಆದ್ಮಿ ಪಕ್ಷದ ನಿರ್ಣಯವನ್ನು ಖಂಡಿಸಿದರು.
ಕಾವೇರಿ ವಿವಾದದಲ್ಲಿ ಬಿಜೆಪಿ-ಜೆಡಿಎಸ್ ರಾಜಕೀಯ ಮಾಡುತ್ತಿವೆ : ಸಿಎಂ
ಸಭೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶಿವರಾಮೇಗೌಡ, ಪ್ರವೀಣ್ ಕುಮಾರ್ ಶೆಟ್ಟಿ, ಕನ್ನಡ ಸೇನೆಯ ರಾಜ್ಯಾಧ್ಯಕ್ಷರಾದ ಕೆ.ಆರ್. ಕುಮಾರ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಅಧ್ಯಕ್ಷ ಎನ್.ಮೂರ್ತಿ, ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಮಂಜುನಾಥ್ ದೇವ್, ಹಾಗೂ ಹೆಚ್.ವಿ. ಗಿರೀಶ್ ಗೌಡ ಹಾಗೂ ಅನೇಕ ಕನ್ನಡಪರ ಸಂಘಟನೆಗಳ ಮುಖಂಡರು, ಹೋರಾಟಗಾರರು ಸೇರಿದಂತೆ ಮತ್ತಿತರರು ಇದ್ದರು.