ನವದೆಹಲಿ,ಜೂ.22- ರಾಹುಲ್‌ಗಾಂಧಿ ರಾಜೀನಾಮೆಯಿಂದ ತೆರವಾಗಲಿರುವ ಕೇರಳದ ವಯನಾಡಿನಿಂದ ಸ್ಪರ್ಧಿಸಲು ತೀರ್ಮಾನಿಸಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಪರ ಚುನಾವಣಾ ಪ್ರಚಾರ ನಡೆಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮತಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ತಿಂಗಳ ಆರಂಭದಲ್ಲಿ ತನ್ನ ಸಹೋದರ ರಾಹುಲ್ ಗಾಂಧಿ ಗೆದ್ದ ಕೇರಳದ ಸೀಟಿನಿಂದ ಪ್ರಿಯಾಂಕಾ ಗಾಂಧಿ ಚುನಾವಣಾ ರಾಜಕೀಯಕ್ಕೆ ಕಾಲಿಡುತ್ತಿದ್ದಾರೆ.
ಸೀಟು ಹಂಚಿಕೆಯಲ್ಲಿ ಭಿನ್ನಾಭಿಪ್ರಾಯದಿಂದಾಗಿ ಮಮತಾ ಬ್ಯಾನರ್ಜಿ ಮತ್ತು ಕಾಂಗ್ರೆಸ್ ಪಶ್ಚಿಮ ಬಂಗಾಳ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿರಲಿಲ್ಲ. ಆದಾಗ್ಯೂ, ಎರಡು ಪಕ್ಷಗಳು ಇಂಡಿ ಒಕ್ಕೂಟದ ಪಾಲುದಾರ ಮಿತ್ರಪಕ್ಷಗಳಾಗಿ ಉಳಿದಿವೆ.
ಡಿಸೆಂಬರ್‌ನಲ್ಲಿ, ವಾರಣಾಸಿಯಲ್ಲಿ ಪ್ರಿಯಾಂಕಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಬೇಕು ಎಂದು ಬ್ಯಾನರ್ಜಿ ಸಲಹೆ ನೀಡಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಈ ವರದಿ ಕೇಳಿಬಂದಿದೆ.
ಅಧೀರ್ ರಂಜನ್ ಚೌಧರಿ ಅವರು ಮಮತಾ ಬ್ಯಾನರ್ಜಿ ಅವರನ್ನು ಗುರಿಯಾಗಿಸಿ ಸಾರ್ವಜನಿಕ ಹೇಳಿಕೆಗಳನ್ನು ನೀಡಿದ ನಂತರ ಟಿಎಂಸಿ ಮತ್ತು ಕಾಂಗ್ರೆಸ್ ನಡುವಿನ ಸಂಬಂಧ ಹದಗೆಟ್ಟಿತು ಇದೀಗ ಎರಡು ಪಕ್ಷಗಳ ನಡುವಿನ ಭಿನ್ನಮತ ದೂರವಾಗುತ್ತಿರುವ ಸೂಚನೆಗಳು ದೊರೆತ ನಂತರ ಇಂತಹ ಮಾತುಗಳು ಕೇಳಿ ಬರುತ್ತಿದೆ.