Tuesday, November 26, 2024
Homeರಾಜ್ಯವಿಧಾನಪರಿಷತ್‌ನ ಒಂದು ಸದಸ್ಯ ಸ್ಥಾನಕ್ಕೆ ಜೂ. 25ರಂದು ಅಧಿಸೂಚನೆ

ವಿಧಾನಪರಿಷತ್‌ನ ಒಂದು ಸದಸ್ಯ ಸ್ಥಾನಕ್ಕೆ ಜೂ. 25ರಂದು ಅಧಿಸೂಚನೆ

ಬೆಂಗಳೂರು, ಜೂ.23- ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರ ರಾಜೀನಾಮೆಯಿಂದ ತರೆವಾಗಿರುವ ವಿಧಾನಪರಿಷತ್‌ನ ಒಂದು ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ ಘೋಷಣೆಯಾಗಿದ್ದು, ಜೂ. 25ರಂದು ಅಧಿಸೂಚನೆ ಹೊರಬೀಳಲಿದೆ.

ಅಂದಿನಿಂದ ಜುಲೈ ಎರಡರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ನಾಮಪತ್ರ ಸಲ್ಲಿಕೆಗೆ ಜುಲೈ 2 ಕಡೆಯ ದಿನವಾಗಿದೆ. ವಿಧಾನಸಭೆ ಸದಸ್ಯರಿಂದ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಈ ಉಪ ಚುನಾವಣೆ ನಡೆಯಲಿದೆ. 2028ರ ಜೂ.14 ರವರೆಗೆ ಈ ಚುನಾವಣೆಯಲ್ಲಿ ಆಯ್ಕೆಯಾಗುವ ಸದಸ್ಯರ ಅವಧಿ ಇರಲಿದೆ.

ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಟಿಕೆಟ್‌ ನೀಡಲಿಲ್ಲ ಎಂದು ಅಸಮಾಧಾನಗೊಂಡು ಜಗದೀಶ್‌ ಶೆಟ್ಟರ್‌ ಬಿಜೆಪಿ ತೊರೆದು ಕಾಂಗ್ರೆಸ್‌‍ ಸೇರಿದ್ದರು. ಕಾಂಗ್ರೆಸ್‌‍ನಿಂದ ಸ್ಪರ್ಧಿಸಿದ್ದ ಅವರು ಪರಾಭವಗೊಂಡಿದ್ದರು. ನಂತರ ವಿಧಾನಸಭೆಯ ಸದಸ್ಯರಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು.

ಈಗ ಮತ್ತೆ ಕಾಂಗ್ರೆಸ್‌‍ ತೊರೆದು ಬಿಜೆಪಿಗೆ ಮರಳಿದ್ದು, ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶೆಟ್ಟರ್‌ ಚುನಾಯಿತರಾಗಿದ್ದಾರೆ.ಒಂದು ಸ್ಥಾನಕ್ಕೆ ಉಪ ಚುನಾವಣೆ ನಡೆಯುವುದರಿಂದ ಆಡಳಿತಾರೂಢ ಕಾಂಗ್ರೆಸ್‌‍ ಅಭ್ಯರ್ಥಿ ಚುನಾಯಿತರಾಗಲಿದ್ದಾರೆ. ಹೀಗಾಗಿ ಜೆಡಿಎಸ್‌‍ ಮತ್ತು ಬಿಜೆಪಿ ಈ ಉಪಚುನಾವಣೆಯಿಂದ ದೂರ ಉಳಿಯುವ ಸಾಧ್ಯತೆಗಳಿವೆ.

ಈ ಉಪ ಚುನಾವಣೆಗೆ ಸಲ್ಲಿಕೆಯಾಗುವ ನಾಮಪತ್ರಗಳ ಪರಿಶೀಲನೆ ಜು.3ರಂದು ನಡೆಯಲಿದ್ದು, ನಾಮಪತ್ರ ವಾಪಸ್ಸಿಗೆ ಜು.5ರವರೆಗೂ ಅವಕಾಶವಿದೆ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ ಉಳಿದರೆ, ಜು.12ರಂದು ಬೆಳಿಗ್ಗೆ 9ರಿಂದ ಸಂಜೆ ನಾಲ್ಕು ಗಂಟೆವರೆಗೆ ಮತದಾನ ನಡೆಯಲಿದೆ. ಅಂದು 5 ಗಂಟೆಯ ನಂತರ ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. ಜು.16ರವೇಳೆಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

RELATED ARTICLES

Latest News