ಬೆಂಗಳೂರು, ಜೂ.23- ಜೆಡಿಎಸ್‌ನ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರ ವಿರುದ್ಧ ದಾಖಲಾಗಿರುವ ಅಸಹಜ ಲೈಂಗಿಕ ದೌರ್ಜನ್ಯ ಆರೋಪವನ್ನು ರಾಜ್ಯಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ.ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಆರ್.ಹಿತೇಂದ್ರ ಅವರು ಸಿಐಡಿಯ ವಿಶೇಷ ಘಟಕ ಮತ್ತು ಆರ್ಥಿಕ ಅಪರಾಧಗಳ ವಿಭಾಗಕ್ಕೆ ಇಂದು ಬೆಳಿಗ್ಗೆ ತುರ್ತು ಸಂದೇಶ ರವಾನೆ ಮಾಡಿದ್ದು, ಹಾಸನ ಜಿಲ್ಲೆ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ಸಿಐಡಿ ತನಿಖೆಗೆ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ.
ಈ ಬಗ್ಗೆ ಹಾಸನ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳಿಗೂ ಮಾಹಿತಿ ನೀಡಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಡತವನ್ನು ತಕ್ಷಣವೇ ಸಿಐಡಿಯ ತನಿಖಾಧಿಕಾರಿಗಳಿಗೆ ಖುದ್ದು ಹಸ್ತಾಂತರಿಸುವಂತೆ ಆದೇಶಿಸಲಾಗಿದೆ. ವಿಚಾರಣೆ ಮುಗಿದ ಬಳಿಕ ವರದಿ ನೀಡುವಂತೆ ಸಿಐಡಿಗೆ ಸಲಹೆ ನೀಡಲಾಗಿದೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಳ್ಳಂಗಿ ಗ್ರಾಮದ ಜೆಡಿಎಸ್ ಯುವ ಕಾರ್ಯಕರ್ತನೊಬ್ಬ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಹಾಯ ಕೇಳಿಕೊಂಡು ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರನ್ನು ತಾವು ಭೇಟಿ ಮಾಡಿದ ವೇಳೆ, ತಮನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಅಮಾನುಷ ಹಾಗೂ ಅಸಹಜವಾಗಿ ತಮೊಂದಿಗೆ ವರ್ತಿಸಲಾಗಿದೆ ಎಂದು ದೂರಿದ್ದರು.
ಈ ಕುರಿತು ಐಪಿಸಿ 377 (ಅಸಹಜ ಲೈಂಗಿಕ ಕ್ರಿಯೆ), 342 (ಬಲವಂತವಾಗಿ ಕೂಡಿ ಹಾಕುವುದು), 506 (ಜೀವ ಬೆದರಿಕೆ) ಮತ್ತು 34 ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ನಿನ್ನೆ ಪ್ರಕರಣದ ವಿಚಾರಣೆ ನಡೆಸಿದ ಗ್ರಾಮಾಂತರ ಠಾಣೆ ಪೊಲೀಸರು ಇಂದು ಮುಂಜಾನೆ ಸೂರಜ್ ರೇವಣ್ಣ ಅವರನ್ನು ಬಂಧಿಸಿದ್ದಾರೆ.
ಇದಕ್ಕೂ ಮೊದಲು ಸೂರಜ್ ರೇವಣ್ಣ ಅವರ ಆಪ್ತ ಶಿವಕುಮಾರ್ ಎಂಬುವರು ಹೊಳೆನರಸೀಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಹಾಯ ಕೇಳಿಕೊಂಡು ಬಂದ ವ್ಯಕ್ತಿ ತಮನ್ನು ಹಾಗೂ ಸೂರಜ್ ರೇವಣ್ಣ ಅವರನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದು, 5 ಕೋಟಿ ರೂ. ಗಳನ್ನು ನೀಡದೇ ಇದ್ದರೆ ಸುಳ್ಳು ಆರೋಪ ಮಾಡಿ, ಪ್ರಕರಣ ದಾಖಲಿಸುವುದಾಗಿ ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದರು. ಈ ಕುರಿತು ಪ್ರಕರಣ ದಾಖಲಿಸಲಾಗಿದೆ.
ನಿನ್ನೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರ ಹೇಳಿಕೆ ಪ್ರಕಾರ, ಸಂತ್ರಸ್ತ ಯುವಕನಾಗಲೀ, ಸೂರಜ್ ರೇವಣ್ಣ ಆಗಲೀ ಅಧಿಕೃತವಾಗಿ ದೂರು ನೀಡಿರಲಿಲ್ಲ. ಆದರೆ ಸಂತ್ರಸ್ತ ಯುವಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಸಚಿವ ಡಾ.ಜಿ.ಪರಮೇಶ್ವರ್, ಡಿಜಿಪಿ, ಹಾಸನದ ಎಸ್ಪಿ ಅವರಿಗೆ ಪತ್ರ ಬರೆದು ತಮಗಾಗಿರುವ ಅನ್ಯಾಯಗಳ ಬಗ್ಗೆ ವಿವರಣೆ ನೀಡಿದರು.
ಪತ್ರ ಬರೆಯುವುದರಿಂದ ಪ್ರಕರಣದ ಮಾಹಿತಿ ನೀಡಲು ಸಾಧ್ಯ. ದೂರು ಬಂದರೆ ಪ್ರಕರಣ ದಾಖಲಿಸಿ, ತನಿಖೆ ನಡೆಸಿ, ಸಾಕ್ಷ್ಯ ಸಂಗ್ರಹಿಸುವುದಾಗಿ ಹೇಳಿದ್ದರು. ಇಂದು ಏಕಾಏಕಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ.ಈ ಮೊದಲು ಸೂರಜ್ ರೇವಣ್ಣ ಅವರ ಸಹೋದರ ಹಾಗೂ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಎಸ್‌ಐಟಿ ತನಿಖೆ ನಡೆಯುತ್ತಿದೆ. ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪಕ್ಕೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ ಕೆಲಕಾಲ ವಿದೇಶದಲ್ಲಿ ತಲೆಮರೆಸಿಕೊಂಡಿದ್ದರು. ಇತ್ತೀಚೆಗೆ ಭಾರತಕ್ಕೆ ಬಂದ ಅವರನ್ನು ಬಂಧಿಸಲಾಗಿದೆ.