ಮೆಕ್ಕಾ,ಜೂ.24- ಹಜ್ ಯಾತ್ರೆಗಾಗಿ ಸೌದಿ ಅರೇಬಿಯಾದ ಮೆಕ್ಕಾ ಕ್ಕೆ ತೆರಳಿದ ಯಾತ್ರಾರ್ಥಿಗಳಿಗೆ ಬೇಸಿಗೆಯ ಬಿಸಿಲು, ಬಿಸಿಗಾಳಿಯ ಹೊಡೆತವು ಮಾರಣಾಂತಿಕವಾಗಿ ಪರಿಣಮಿಸಿದೆ.ಹಜ್ ಯಾತ್ರೆಯ ಸಮಯದಲ್ಲಿ 1,301 ಮಂದಿ ಮೃತಪಟ್ಟಿದ್ದಾರೆ ಎಂದು ಸೌದಿ ಅರೇಬಿಯಾ ನಿನ್ನೆ ಹೇಳಿದೆ. ಬಿಸಿಲಿನ ಝಳವೇ ಇದಕ್ಕೆ ಪ್ರಮುಖ ಕಾರಣ ಎಂದು ತಿಳಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಸೌದಿ ಸರ್ಕಾರ, ಈ ವರ್ಷ ಶಾಖದ ಒತ್ತಡದಿಂದ ಹಲವು ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಸಾವಿನ ಸಂಖ್ಯೆ 1,301ಕ್ಕೆ ತಲುಪಿದೆ. ಇನ್ನು ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದೆ. ಮೃತಪಟ್ಟವರಲ್ಲಿ ಬಹುತೇಕರು ಅಂದರೆ ಶೇ. 83ರಷ್ಟು ಮಂದಿ ಹಜ್ ಮಾಡಲು ಅರ್ಹರಾಗಿರಲಿಲ್ಲ.
ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳದೆ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಂಡು ಮೈಲಿಗಟ್ಟಲೆ ನಡೆದಿದ್ದಾರೆ. ಇದರಿಂದ ಹೆಚ್ಚಿನ ಸಾವು ಸಂಭವಿಸಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಮೃತರ ಪೈಕಿ ವೃದ್ಧರು ಮತ್ತು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೃತರನ್ನು ಗುರುತಿಸಲಾಗಿದೆ ಎಂದು ಸಿಎನ್‌ಎನ್ ವರದಿ ತಿಳಿಸಿದೆ.
ಈ ವರ್ಷದ ಹಜ್ ಯಾತ್ರೆಯ ಸಮಯದಲ್ಲಿ ವರದಿಯಾದ ನೂರಾರು ಸಾವುಗಳು ಮತ್ತು ಗಾಯಗಳ ಹಿಂದಿನ ಮುಖ್ಯ ಕಾರಣ ವಿಪರೀತ ಶಾಖ ಎಂದು ಕಂಡುಕೊಳ್ಳಲಾಗಿದೆ. ಮೆಕ್ಕಾದಲ್ಲಿ ತಾಪಮಾನವು ದಾಖಲೆಯ ಪ್ರಮಾಣಕ್ಕೆ ಏರಿದೆ. ಅನಧಿಕೃತ ಯಾತ್ರೆಯ ಕಾರಣದಿಂದ ಸಮಸ್ಯೆಗಳು ಹೆಚ್ಚಿವೆ ಎಂದು ವಿವಿಧ ಅಧಿಕಾರಿಗಳು ಹೇಳಿದ್ದಾರೆ.
ಪವಿತ್ರ ನಗರವಾದ ಮೆಕ್ಕಾವನ್ನು ಕಾನೂನುಬದ್ಧವಾಗಿ ಪ್ರವೇಶಿಸಲು ಯಾತ್ರಾರ್ಥಿಗಳು ಲಭ್ಯವಿರುವ ಪರವಾನಗಿಗಳಲ್ಲಿ ಒಂದನ್ನು ಪಡೆದುಕೊಳ್ಳಬೇಕು. ಈ ಪರವಾನಗಿ ದುಬಾರಿ. ಹೀಗಾಗಿ ಸಾಮಾನ್ಯವಾಗಿ ಪ್ರತಿ ವರ್ಷ ಸಾವಿರಾರು ಮಂದಿ ಅನಧಿಕೃತವಾಗಿ ಮೆಕ್ಕಾ ಪ್ರವೇಶಿಸುತ್ತಾರೆ. ಪರವಾನಗಿ ಹೊಂದಿರುವ ಯಾತ್ರಾರ್ಥಿಗಳು ಹವಾನಿಯಂತ್ರಣ, ನೀರು ಮತ್ತು ಆಹಾರ ಸರಬರಾಜಿನ ವ್ಯವಸ್ಥೆ ಹೊಂದಿರುವ ಬಸ್‌ನಲ್ಲಿ ಪ್ರಯಾಣಿಸುವ ಅವಕಾಶ ಹೊಂದಿದ್ದಾರೆ.
ವೈಯಕ್ತಿಕ ಮಾಹಿತಿ ಅಥವಾ ಗುರುತಿನ ದಾಖಲೆಗಳ ಕೊರತೆಯ ಹೊರತಾಗಿಯೂ ಮೃತರನ್ನು ಗುರುತನ್ನು ಪತ್ತೆ ಹಚ್ಚಲಾಗಿದೆ. ಮೃತರನ್ನು ಗುರುತಿಸಲು, ಗೌರವ ಪೂರ್ವಕವಾಗಿ ಸಮಾಧಿ ಮಾಡಲು ಸೂಕ್ತ ಕ್ರಮ ಕೈಗೊಂಡಿದ್ದೇವೆ. ಮೃತರ ಕುಟುಂಬಗಳಿಗೆ ಮರಣ ಪ್ರಮಾಣ ಪತ್ರಗಳನ್ನು ನೀಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅತಿಯಾದ ಬಿಸಿಲಿನ ಜತೆಗೆ ಮೂಲ ಸೌಕರ್ಯದ ಕೊರತೆಯಿಂದ ಈ ಬಾರಿಯ ಹಜ್ ಯಾತ್ರೆ ಅಸಹನೀಯವಾಗಿದೆ ಎಂದು ಕೆಲವು ಪ್ಯಾರವಾಸಿಗರು ದೂರಿದ್ದಾರೆ. ಅಧಿಕೃತ ಪ್ರವಾಸ ಕೈಗೊಂಡವರೂ ಹೆಚ್ಚಿನ ಸಮಯವನ್ನು ಸುಡುವ ಬಿಸಿಲಿನಲ್ಲಿ ಹೊರಾಂಗಣದಲ್ಲಿ ಕಳೆಯುವಂತಾಗಿತ್ತು.
ಮೆಕ್ಕಾ ತೀರ್ಥಯಾತ್ರೆಯಲ್ಲಿ ತೊಡಗಿರುವ 16 ಹಜ್ ಪ್ರವಾಸೋದ್ಯಮ ಸಂಸ್ಥೆಗಳ ಪರವಾನಗಿಯನ್ನು ಹಿಂತೆಗೆದುಕೊಳ್ಳುವುದಾಗಿ ಈಗಾಗಲೇ ಈಜಿಪ್‌್ಟ ಸರ್ಕಾರ ಭರವಸೆ ನೀಡಿದೆ. ಕೆಲವು ಸಂಸ್ಥೆಗಳು ಉಳಿಯಲು ಸರಿಯಾದ ವಸತಿ ಸೌಕರ್ಯವನ್ನು ಒದಗಿಸದೆ ಸಾಕಷ್ಟು ಮಂದಿ ಶಾಖಕ್ಕೆ ತಮನ್ನು ಒಡ್ಡಿಕೊಂಡು ಸಂಕಷ್ಟ ಅನುಭವಿಸಿದ್ದಾರೆ. ಮೃತರ ಕುಟುಂಬಕ್ಕೆ ಸೂಕ್ತ ನೆರವು ನೀಡುವುದಾಗಿ ಈಜಿಪ್‌್ಟ ಪ್ರಧಾನಿ ಮುಸ್ತಾ ಮಡ್ಬೌಲಿ ಭರವಸೆ ನೀಡಿದ್ದಾರೆ.