ಇಂದೋರ್,ಜೂ.24- ಪತಿ ತೊರೆದು ಬಂದಿದ್ದ ಮಹಿಳೆ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿ ಅದು ಸಾಧ್ಯವಾಗದಿದ್ದಾಗ ಆಕೆಯನ್ನು ಕೊಲೆ ಮಾಡಿ ಶವವನ್ನು ತುಂಡರಿಸಿ ದೇಹದ ಭಾಗಗಳನ್ನು ಎರಡು ರೈಲುಗಳಲ್ಲಿ ಎಸೆದಿದ್ದ ಖತರ್ನಾಕ್ ವೃದ್ಧ ಆರೋಪಿಯನ್ನು ಬಂಧಿಸುವಲ್ಲಿ ಮಧ್ಯಪ್ರದೇಶದ ಉಜ್ಜಯನಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು 60 ವರ್ಷದ ವೃದ್ಧ ಕಮಲೇಶ್ ಪಟೇಲ್ ಎಂದು ಗುರುತಿಸಲಾಗಿದೆ. ಪತಿಯೊಂದಿಗೆ ಜಗಳವಾಡಿ ಮನೆ ತೊರೆದು ಬಂದು ರೈಲು ನಿಲ್ದಾಣದಲ್ಲಿ ಕುಳಿತಿದ್ದ ಮಹಿಳೆಯನ್ನು ಈತ ಕಳೆದ ಜೂನ್ 6 ತನ್ನ ಮನೆಗೆ ಕರೆದೊಯ್ದಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.
ಮನೆಗೆ ಬಂದಿದ್ದ ಮಹಿಳೆಗೆ ಆಹಾರದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿ ನೀಡಿ ಆಕೆಯ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದ ಆದರೆ ಮಹಿಳೆ ಎಚ್ಚರಗೊಂಡು ಕೂಗಿಕೊಳ್ಳಲು ಮುಂದಾದಾಗ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿ ಇಂದೋರ್-ನಾಗ್ಡಾ ಮತ್ತು ಇಂದೋರ್-ಡೆಹ್ರಾಡೂನ್ ಪ್ಯಾಸೆಂಜರ್ ರೈಲುಗಳಲ್ಲಿ ಇರಿಸಿ ಪರಾರಿಯಾಗಿದ್ದ. 37 ವರ್ಷದ ಬಲಿಪಶುವಿನ ಕೈಗಳು ಮತ್ತು ಕಾಲುಗಳು ಜೂನ್ 10 ರಂದು ಉತ್ತರಾಖಂಡದ ಋಷಿಕೇಶದಲ್ಲಿ ರೈಲಿನಲ್ಲಿ ಪತ್ತೆಯಾಗಿದ್ದವು. ಉಳಿದ ದೇಹವನ್ನು ಜೂನ್ 9 ರಂದು ಇಂದೋರ್‌ನಲ್ಲಿ ರೈಲಿನಿಂದ ವಶಪಡಿಸಿಕೊಳ್ಳಲಾಗಿತ್ತು.
ಏತನಧ್ಯೆ, ಜೂನ್ 12 ರಂದು ರತ್ಲಾಮ್ ಜಿಲ್ಲೆಯ ಬಿಲ್ಪಾಂಕ್ ಪೊಲೀಸ್ ಠಾಣೆಯಲ್ಲಿ ಆಕೆಯ ಕುಟುಂಬವು ಕಾಣೆಯಾದ ವ್ಯಕ್ತಿಯ ದೂರು ದಾಖಲಿಸಿದ್ದರು.ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪಟೇಲ್‌ನನ್ನು ಉಜ್ಜಯಿನಿಯಿಂದ ಬಂಧಿಸಲಾಗಿದ್ದು, ಅಪರಾಧಕ್ಕೆ ಬಳಸಿದ ಚಾಕುವನ್ನು ಇತರ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.