Friday, November 22, 2024
Homeರಾಷ್ಟ್ರೀಯ | Nationalಮಳೆ ಅಬ್ಬರಕ್ಕೆ ಕುಸಿದ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್‌ 1ರ ಮೇಲ್ಚಾವಣಿ, ಓರ್ವ ಸಾವು

ಮಳೆ ಅಬ್ಬರಕ್ಕೆ ಕುಸಿದ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್‌ 1ರ ಮೇಲ್ಚಾವಣಿ, ಓರ್ವ ಸಾವು

ನವದೆಹಲಿ,ಜೂ.28- ಮಳೆ ಅಬ್ಬರಕ್ಕೆ ರಾಜಧಾನಿ ದೆಹಲಿಯ ಐಜಿಐ ವಿಮಾನ ನಿಲ್ದಾಣದ ಟರ್ಮಿನಲ್‌ 1ರಲ್ಲಿ ಮೇಲ್ಚಾವಣಿಯ ಒಂದು ಭಾಗ ಕುಸಿದು ಒಬ್ಬ ಮೃತಪಟ್ಟು, ಆರು ಮಂದಿ ಗಾಯಗೊಂಡಿದ್ದಾರೆ.ಇಡೀರಾತ್ರಿ ಸುರಿದ ಭಾರೀ ಮಳೆಯ ಪರಿಣಾಮ ಮುಂಜಾನೆ 5.30ರ ಸುಮಾರಿಗೆ ಟರ್ಮಿನಲ್‌ 1ರ ಬದಿಯಲ್ಲಿ ನಿಲ್ಲಿಸಲಾದ ಟ್ಯಾಕ್ಸಿಗಳ ಮೇಲೆ ಛಾವಣಿ ಕುಸಿದುಬಿದ್ದಿದೆ. ಕಾರು, ಟ್ಯಾಕ್ಸಿಗಳು ಜಖಂ ಆಗಿವೆ. ಓರ್ವ ಮೃತಪಟ್ಟಿದ್ದಾರೆ.

ಘಟನೆಯ ನಂತರ ವಿಮಾನ ನಿಲ್ದಾಣದ ಅಧಿಕಾರಿಗಳು ಟರ್ಮಿನಲ್‌ 1ರಿಂದ ಎಲ್ಲಾ ನಿರ್ಗಮನವನ್ನು ಸ್ಥಗಿತಗೊಳಿಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಮಳೆಯ ಅಬ್ಬರಕ್ಕೆ ಐಜಿಐ ವಿಮಾನ ನಿಲ್ದಾಣದ ಟರ್ಮಿನಲ್‌ 1ರಲ್ಲಿ ಚಾವಣಿ ಕುಸಿದಿದೆ. ಈ ಪ್ರದೇಶದಲ್ಲಿ ನಿಲ್ಲಿಸಿದ್ದ ಕೆಲ ವಾಹನಗಳು ಸಂಪೂರ್ಣ ಜಖಂಗೊಂಡಿವೆ ಎಂದು ದೆಹಲಿ ಅಗ್ನಿಶಾಮಕ ಸೇವಾ ನಿರ್ದೇಶಕ ಅತುಲ್‌ ಗರ್ಗ್‌ ತಿಳಿಸಿದ್ದಾರೆ.

ಘಟನೆ ಕುರಿತು ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್‌ ಮೋಹನ್‌ ನಾಯ್ಡು ಕಿಂಜರಾಪು, ದೆಹಲಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಘಟನಾ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ 1ರಲ್ಲಿ ಎಲ್ಲಾ ಸಂತ್ರಸ್ತ ಪ್ರಯಾಣಿಕರಿಗೆ ಸಹಾಯ ಮಾಡಲು ವಿಮಾನಯಾನ ಸಂಸ್ಥೆಗಳಿಗೆ ಸಲಹೆ ನೀಡಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ತುರ್ತು ಸಿಬ್ಬಂದಿ ಎಲ್ಲಾ ಅಗತ್ಯ ನೆರವು ಮತ್ತು ಗಾಯಾಳುಗಳಿಗೆ ವೈದ್ಯಕೀಯ ನೆರವು ನೀಡಲು ಕೆಲಸ ಮಾಡುತ್ತಿದ್ದಾರೆ. ಟರ್ಮಿನಲ್‌ 1 ರಿಂದ ಎಲ್ಲಾ ನಿರ್ಗಮನಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಸುರಕ್ಷತಾ ಕ್ರಮವಾಗಿ ಚೆಕ್‌‍-ಇನ್‌ ಕೌಂಟರ್‌ಗಳನ್ನು ಮುಚ್ಚಲಾಗಿದೆ.

ಈ ಘಟನೆ ಬಗ್ಗೆ ನಾವು ವಿಷಾದಿಸುತ್ತೇವೆ ಮತ್ತು ಉಂಟಾದ ಯಾವುದೇ ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇವೆ ಎಂದು ದೆಹಲಿ ಇಂಟರ್ನ್ಯಾಷನಲ್‌ ಏರ್ಪೋರ್ಟ್‌ ಲಿಮಿಟೆಡ್‌ ವಕ್ತಾರರು ತಿಳಿಸಿದ್ದಾರೆ.

RELATED ARTICLES

Latest News