ಬೆಂಗಳೂರು, ಜೂ.28-ಸಂಚಾರಿ ನಿಯಮಗಳನ್ನು ಪಾಲಿಸದೇ ನಿರ್ಲಕ್ಷ್ಯ ವಹಿಸುವವರ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಹಾವೇರಿ ಜಿಲ್ಲೆಯ ಬ್ಯಾಡಗಿ ಬಳಿ ಸಂಭವಿಸಿರುವ ಭೀಕರ ರಸ್ತೆ ಅಪಘಾತದಲ್ಲಿ 13 ಜನ ದುರ್ಮರಣ ಹೊದಿರುವ ಸುದ್ದಿ ಕೇಳಿ ನನಗೆ ತೀವ್ರ ದುಃಖ ಉಂಟಾಗಿದೆ ಎಂದಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿರುವವರಿಗೆ ರಾಜ್ಯ ಸರ್ಕಾರ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ಒತ್ತಾಯಿಸಿರುವ ಅವರು, ಲಾರಿ ಚಾಲಕ ದೋಷಪೂರಿತ ಪಾರ್ಕಿಂಗ್ ಮಾಡಿರುವುದೇ ಅಪಘಾತಕ್ಕೆ ಕಾರಣವೆಂದು ಹಾವೇರಿ ಪೊಲೀಸ್ ವರಿಷ್ಠಾಧಿಕಾರಿಗಳು ಹೇಳಿದ್ದಾರೆ. ಚಾಲಕರು ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಈ ಗ್ಗೆ ನಿರ್ಲಕ್ಷ್ಯ ತೋರಿ ಜೀವಕ್ಕೆ ಎರವಾಗುತ್ತಿರುವುದು ನೋವಿನ ಸಂಗತಿ ಎಂದು ತಿಳಿಸಿದ್ದಾರೆ.
ತಾಯಿ ಸವದತ್ತಿ ಶ್ರೀ ರೇಣುಕಾ ಯಲ್ಲಮನ ದರ್ಶನ ಪಡೆದು ಮರಳಿ ಊರಿಗೆ ಹೋಗುತ್ತಿರುವಾಗ ಈ ಅಪಘಾತದ ದುರಂತ ಸಂಭವಿಸಿದೆ. ಮೃತಪಟ್ಟಿರುವ ಎಲ್ಲರ ಆತಕ್ಕೆ ಚಿರಶಾಂತಿ ಸಿಗಲಿ ಹಾಗೂ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.