ಬೆಂಗಳೂರು,ಜೂ.30- ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹುದ್ದೆಗಳ ಬಗ್ಗೆ ರಾಜ್ಯದಲ್ಲಿ ಇನ್ನು ಮುಂದೆ ಯಾರೇ ಚರ್ಚೆ ಮಾಡಿದರೂ ಹೈಕಮಾಂಡ್ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ರವಾನಿಸಿದೆ.ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಹೈಕಮಾಂಡ್ ಜೊತೆ ಚರ್ಚೆ ನಡೆಸಿದ್ದು, ಅದರ ಪ್ರಯುಕ್ತ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹುದ್ದೆಗಳ ಬಗ್ಗೆ ಇನ್ನು ಮುಂದೆ ಯಾವುದೇ ಸಚಿವರಾಗಲೀ, ಶಾಸಕರಾಗಲೀ ಹೇಳಿಕೆ ನೀಡಿದರೆ ನೋಟೀಸ್ ನೀಡುವುದೂ ಸೇರಿದಂತೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಹೈಕಮಾಂಡ್ ಎಚ್ಚರಿಕೆಯ ಸಂದೇಶ ರವಾನಿಸಿದೆ.
ವಿಶೇಷವಾಗಿ ಸಚಿವರು ತಮಗೆ ವಹಿಸಿರುವ ಇಲಾಖೆಗಳ ಜವಾಬ್ದಾರಿಗಳಿಗೆ ಮಾತ್ರವೇ ಮಾಧ್ಯಮಗಳಿಗೆ ಹೇಳಿಕೆ ನೀಡಬೇಕು. ಅದನ್ನು ಹೊರತುಪಡಿಸಿ ಪಕ್ಷದ ವಿಚಾರವಾಗಿ ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಪ್ರಶ್ನೆ ಮಾಡಿದರೆ ಕಠಿಣ ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ಕುರಿತು ಡಿ.ಕೆ.ಶಿವಕುಮಾರ್ ಆಪ್ತರು ಸೇರಿದಂತೆ ಕೆಲ ಸಚಿವರು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಇನ್ನು ಸಿದ್ದರಾಮಯ್ಯ ಅವರ ಬಣ ಪದೇಪದೇ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಬಗ್ಗೆ ಪ್ರಸ್ತಾಪಿಸುತ್ತಲೇ ಬರುತ್ತಿದ್ದಾರೆ. ಇದು ಸಹಜವಾಗಿಯೇ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿಯವರ ನಡುವೆ ಅನಗತ್ಯವಾಗಿ ಗೊಂದಲದ ವಾತಾವರಣ ಸೃಷ್ಟಿಸುತ್ತಿದೆ.
ಯಾವುದೇ ಹುದ್ದೆಗಳ ಸೃಷ್ಟಿಯ ಬಗ್ಗೆ ಇನ್ನು ಮುಂದೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ರಾಜ್ಯನಾಯಕರು ಈ ಬಗ್ಗೆ ಹೇಳಿಕೆ ನೀಡಬಾರದು ಎಂದು ತಾಕೀತು ಮಾಡಲಾಗಿದೆ. ಅದನ್ನು ಮೀರಿ ಸಚಿವರು, ಶಾಸಕರು ಹೇಳಿಕೆ ನೀಡುವುದನ್ನು ಮುಂದುವರೆಸಿದರೆ ಶಿಸ್ತು ಸಮಿತಿಗೆ ದೂರನ್ನು ರವಾನಿಸಬೇಕಾಗುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪ್ರತ್ಯೇಕವಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ನಿಮ ಬೆಂಬಲಿಗರಿಗೆ ಸ್ಪಷ್ಟ ಸೂಚನೆ ಕೊಡಿ, ಯಾವುದೇ ಗೊಂದಲದ ಹೇಳಿಕೆ ಬರದಂತೆ ನೋಡಿಕೊಳ್ಳಿ, ನಾಳೆ ಪಕ್ಷ ಶಿಸ್ತು ಉಲ್ಲಂಘಿಸಿದವರ ವಿರುದ್ಧ ಕ್ರಮಕ್ಕೆ ಮುಂದಾದರೆ ಹಿಂಬಾಲಕರು ಎಂಬ ಕಾರಣಕ್ಕೆ ರಕ್ಷಣೆಗೆ ಬರಬೇಡಿ ಎಂದು ತಾಕೀತು ಮಾಡಿದ್ದಾರೆ ಎಂದು ತಿಳಿದುಬಂದಿದೆ.