Thursday, September 19, 2024
Homeಮನರಂಜನೆಕನ್ನಡ ಚಲನಚಿತ್ರರಂಗದ ಬೆಳವಣಿಗೆ ಹಾಗೂ ಸಮಸ್ಯೆಗಳ ಕುರಿತು ಚರ್ಚಿಸಲು ಶೀಘ್ರದಲ್ಲೇ ಸಭೆ : ಸಿಎಂ

ಕನ್ನಡ ಚಲನಚಿತ್ರರಂಗದ ಬೆಳವಣಿಗೆ ಹಾಗೂ ಸಮಸ್ಯೆಗಳ ಕುರಿತು ಚರ್ಚಿಸಲು ಶೀಘ್ರದಲ್ಲೇ ಸಭೆ : ಸಿಎಂ

ಬೆಂಗಳೂರು,ಜೂ.30– ಕನ್ನಡ ಚಲನಚಿತ್ರರಂಗದ ಬೆಳವಣಿಗೆ ಹಾಗೂ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಶೀಘ್ರದಲ್ಲೇ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.ಶಿವಾನಂದ ವೃತ್ತದ ಬಳಿ ನಿರ್ಮಿಸಲಾಗಿರುವ ಕನ್ನಡ ಚಲನಚಿತ್ರರಂಗದ ನಿರ್ಮಾಪಕರ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು, ಚಿತ್ರರಂಗದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅಗತ್ಯ ಪರಿಹಾರ ಕಂಡುಕೊಳ್ಳಲು ಚಲನಚಿತ್ರ ವಾಣಿಜ್ಯ ಮಂಡಳಿ ಸಮುಖದಲ್ಲಿ ಕಲಾವಿದರು, ನಿರ್ಮಾಪಕರು, ಚಿತ್ರಮಂದಿರಗಳ ಮಾಲೀಕರು ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖರ ಜೊತೆ ಚರ್ಚೆ ನಡೆಸಲಾಗುವುದು.

ಹಿರಿಯ ಕಲಾವಿದರಿಗೆ ನೆರವು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಸುವುದಾಗಿ ಹೇಳಿದರು.ಸಭೆಯ ದಿನಾಂಕ ಮತ್ತು ಸಮಯದ ಬಗ್ಗೆ ಪ್ರಸ್ತಾಪವಾದಾಗ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸಾಧು ಕೋಕಿಲಾ ಭಾನುವಾರ ಸಭೆ ಕರೆಯಬೇಡಿ ಎಂದು ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು ಭಾನುವಾರವೇ ನಿಮಗೆ ಒಳ್ಳೆಯ ದಿನ. ಭಾನುವಾರ ಬೆಳಿಗ್ಗೆ 11 ಗಂಟೆಗೆ ಸಭೆ ಸೇರಿ, 1 ಗಂಟೆಗೆ ಸಭೆ ಮುಗಿಸೋಣ ಎಂದು ಹೇಳಿದರು.ಮಾತು ಮುಂದುವರೆಸಿದ ಮುಖ್ಯಮಂತ್ರಿಗಳು, ತಾಂತ್ರಿಕ ಹಾಗೂ ವಿಜ್ಞಾನದ ಬೆಳವಣಿಗೆಯಿಂದ ಚಲನಚಿತ್ರರಂಗಕ್ಕೆ ತೊಂದರೆಯಾಗಿದೆ. ಕಲಾವಿದರಿಗೆ, ತಂತ್ರಜ್ಞರಿಗೆ ಅವಕಾಶಗಳು ಸಿಗಬೇಕು ಎಂಬ ಕಾರಣಕ್ಕೆ ನಿರ್ಮಾಪಕರು ಚಿತ್ರ ನಿರ್ದೇಶಿಸುತ್ತಿದ್ದಾರೆ. ಲಾಭಕ್ಕಾಗಿ ಚಿತ್ರ ಮಾಡುತ್ತಿಲ್ಲ ಎಂದು ಹೇಳಿದರು.

ಕಳೆದ ನಾಲ್ಕು ವರ್ಷಗಳಿಂದಲೂ ಚಲನಚಿತ್ರಗಳಿಗೆ ಪ್ರಶಸ್ತಿಗಳನ್ನು ನೀಡಿಲ್ಲ ಎಂಬ ಮಾಹಿತಿ ಇದೆ. ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಪ್ರಶಸ್ತಿಗಳನ್ನು ಆಯಾ ವರ್ಷವೇ ನೀಡಲಾಗುವುದು ಎಂದು ಭರವಸೆ ನೀಡಿದರು.

ಮೊಬೈಲ್‌ಗಿಂತಲೂ ಚಿತ್ರಮಂದಿರದಲ್ಲಿ ಚಲನಚಿತ್ರ ನೋಡುವ ಅನುಭವ ಸೊಗಸು. ಸಾಮಾಜಿಕ ಕಳಕಳಿಯ ಹಾಗೂ ಸಾಮಾಜಿಕ ಪರಿಣಾಮ ಬೀರುವ ಚಿತ್ರಗಳನ್ನು ನಿರ್ಮಿಸಬೇಕು. ಉತ್ತಮ ಚಿತ್ರಗಳನ್ನು ನಿರ್ಮಿಸಿದರೆ ಜನ ನೋಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಫಿಲಂಸಿಟಿ ನಿರ್ಮಾಣಕ್ಕೆ ಶೀಘ್ರವೇ ಶಂಕುಸ್ಥಾಪನೆ ನೆರವೇರಿಸಲಾಗುವುದು. ಈಗಾಗಲೇ ಜಮೀನು ಹಸ್ತಾಂತರಿಸಲಾಗಿದೆ. ಅದಕ್ಕೆ ಯಾವುದೇ ತೊಡಕುಗಳಿಲ್ಲ. ಪಿಪಿಪಿ ಮಾದರಿಯಲ್ಲಿ ಚಿತ್ರನಗರಿ ನಿರ್ಮಿಸುವುದಾಗಿ ಹೇಳಿದರು.

ಚಲನಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ, ಚಿತ್ರಮಂದಿರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ರಾಜ್ಯಸರ್ಕಾರ ಚಿತ್ರರಂಗದ ಬೆಳವಣಿಗೆಗೆ ನೆರವು ನೀಡಲು ಹಿಂದೆ ಬೀಳುವುದಿಲ್ಲ. ನೂತನ ಕಟ್ಟಡ ಸೇರಿದಂತೆ ಎಲ್ಲಾ ರೀತಿಯ ಬೆಂಬಲ ನೀಡುತ್ತೇನೆ ಎಂದ ಅವರು, ರಾಜ್ಯದಲ್ಲಿ ಕನ್ನಡದ ವಾತಾವರಣ ನಿರ್ಮಿಸಬೇಕು ಎಂದು ಕರೆ ನೀಡಿದರು.

ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ಸಾ.ರಾ.ಗೋವಿಂದು ಅವರು, ಕೇರಳದ ಮಾದರಿಯಲ್ಲಿ ರಾಜ್ಯಸರ್ಕಾರವೇ ಓಟಿಟಿ ವೇದಿಕೆ ನಿರ್ಮಾಣ ಮತ್ತು ನಿಯಮಾವಳಿಗಳನ್ನು ರಚಿಸಬೇಕು. ವಾರ್ತಾ ಇಲಾಖೆಯಿಂದ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ಗೆ 45 ಲಕ್ಷ ರೂ. ವೆಚ್ಚದಲ್ಲಿ ಯೋಜನೆ ತಯಾರಿಸಿ ಚಾಲನೆ ನೀಡಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಅದು ಸ್ಥಗಿತಗೊಂಡಿದೆ. ಅದಕ್ಕೆ ಪುನರ್‌ ಚಾಲನೆ ನೀಡಬೇಕು ಎಂದು ಮನವಿ ಮಾಡಿದರು.

ಸಚಿವ ಭೈರತಿ ಸುರೇಶ್‌, ಶಾಸಕ ರಿಜ್ವಾನ್‌ ಹರ್ಷದ್‌, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸುರೇಶ್‌, ನಟ ಶಿವರಾಜ್‌ಕುಮಾರ್‌, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌, ರಾಜ್ಯಸಭಾ ಸದಸ್ಯರೂ ಆಗಿರುವ ನಟ ಜಗ್ಗೇಶ್‌, ನಿರ್ಮಾಪಕರಾದ ಬಾಮಾ ಹರೀಶ್‌ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES

Latest News