ಬೆಂಗಳೂರು,ಜು.3- ಕಲುಷಿತ ನೀರಿನ ಪ್ರಕರಣಗಳು ಮರುಕಳಿಸಿದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ನಗರದ ಕಂಠೀರವ ಕ್ರೀಡಾಂಗಣದ ಒಳಾಂಗಣ ದಲ್ಲಿ ನಡೆದ ವಿಶ್ವಪರಿಸರ ದಿನಾಚರಣೆಯಲ್ಲಿ ಭೂ ಪರಿವರ್ತನೆ ಮತ್ತು ಒಣಭೂಮಿ ನಿರ್ವಹಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕಲುಷಿತ ನೀರಿನ ಹಾಗೂ ವಿಷಾಹಾರ ಸೇವನೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಎಂದರು.
ಇಂತಹ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು.
ಇನ್ನು ಮುಂದೆ ಯಾವುದೇ ಪ್ರಕರಣಗಳು ವರದಿಯಾದರೂ ಅದಕ್ಕೆ ಅಧಿಕಾರಿಗಳನ್ನು ಜವಾಬ್ದಾರಿಯನ್ನಾಗಿ ಮಾಡಲಾಗುವುದು ಎಂದು ಹೇಳಿದರು.ಡೆಂಘೀ ಜ್ವರ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ರೋಗಕ್ಕೆ ಕಾರಣವಾಗುವ ಸೊಳ್ಳೆಗಳನ್ನು ನಾಶಪಡಿಸಲು ಸಾರ್ವಜನಿಕರ ಸಹಕಾರ ಅಗತ್ಯ. ಆರೋಗ್ಯ ಇಲಾಖೆ, ಬಿಬಿಎಂಪಿ, ಸ್ಥಳೀಯ ಆಡಳಿತದ ಜೊತೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ತ್ಯಾಜ್ಯವನ್ನು ಬೇಕಾಬಿಟ್ಟಿ ಬಿಸಾಡುವ ಬದಲು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಮಳೆ ನೀರನ್ನು ಸಂರಕ್ಷಿಸುವ ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಂಡರೆ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದು ಹೇಳಿದರು.
ನಿಸರ್ಗವನ್ನು ಪ್ರೀತಿಸಬೇಕು. ಮರಗಿಡಗಳನ್ನು ಬೆಳೆಸಬೇಕು. ಒಂದು ಮರ ಕಡಿದರೆ, ಅದಕ್ಕೆ ಬದಲಾಗಿ ಮತ್ತೊಂದು ಗಿಡ ನೆಡಬೇಕು. ಕಳೆದ 20 ವರ್ಷಗಳಿಂದಲೂ ನೆರೆ ಹಾಗೂ ಬರ ಪರಿಸ್ಥಿತಿಗಳು ರಾಜ್ಯವನ್ನು ಕಾಡುತ್ತಿವೆ. ಇವುಗಳನ್ನು ನಿಯಂತ್ರಿಸಲು ವೈಜ್ಞಾನಿಕ ಸಂಶೋಧನೆಗಳು ಸರಿಯಾದ ದಾರಿಯಲ್ಲಿರಬೇಕು. ಎಲ್ಲೆಲ್ಲಿ ಸಂಶೋಧನಾ ಕೇಂದ್ರಗಳನ್ನು ತೆರೆಯಬೇಕು ಎಂಬ ಬಗ್ಗೆ ಗಮನ ಕೊಡುವುದು ಅರಣ್ಯ ಇಲಾಖೆಯ ಜವಾಬ್ದಾರಿ ಎಂದರು.
ಮಕ್ಕಳಲ್ಲಿ ಪರಿಸರ ಜಾಗೃತಿಯ ಅರಿವು ಮೂಡಬೇಕು. ಜಾಗತಿಕ ಅಸಮತೋಲನಗಳ ಬಗ್ಗೆ ತಿಳಿವಳಿಕೆ ನೀಡಬೇಕು. ಒಂದು ದಿನ ಕಾರ್ಯಕ್ರಮ ಆಚರಿಸಿ ಮರೆತುಬಿಡುವ ಬದಲು ಪ್ರತಿದಿನವೂ ಪರಿಸರ ರಕ್ಷಣೆಯ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಜೂ.5 ರಂದು ಪರಿಸರ ದಿನಾಚರಣೆ ಆಚರಿಸಬೇಕಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಕಾರಣಕ್ಕಾಗಿ ಇಂದು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪರಿಸರ ರಕ್ಷಣೆಯ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಮಕ್ಕಳು ಪರಿಸರ ಕಾಳಜಿಯ ಕುರಿತು ಆಶುಭಾಷಣ ನಡೆಸಿದರು. ಕಂಠೀರವ ಕ್ರೀಡಾಂಗಣದ ಹೊರಾಂಗಣದಲ್ಲಿ ಸಸಿ ನೆಟ್ಟ ಮುಖ್ಯಮಂತ್ರಿ ಪರಿಸರ ಮಾಲಿನ್ಯ ತಡೆಗೆ ಕೈಗೊಳ್ಳಬಹುದಾದ ಯೋಜನೆಗಳು ಹಾಗೂ ಯಂತ್ರೋಪಕರಣಗಳ ಪ್ರದರ್ಶನವನ್ನು ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ರೆಹಮಾನ್ಖಾನ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಮರಿಗೌಡ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.