ತುಮಕೂರು, ಜು.6- ಮೆಟೋಪಾಲಿಟನ್ ಸೀಟಿ ಮಾದರಿಯಲ್ಲೇ ತುಮಕೂರು ರೈಲ್ವೆ ನಿಲ್ದಾಣವನ್ನು ನೂರು ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಸಂಬಂಧ ಚರ್ಚಿಸಲಾಗಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರುವ ತಿಂಗಳು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಈ ಸಂದರ್ಭದಲ್ಲಿ ರಾಜ್ಯ ಸೇರಿದಂತೆ ದೇಶಕ್ಕೆ ಸಿಹಿ ಸುದ್ದಿ ನೀಡುತ್ತೇವೆ ಎಂದರು.
ತುಮಕೂರು ಬೆಂಗಳೂರಿಗೆ ಸಮೀಪವಿರುವುದರಿಂದ ತುಮಕೂರು ಮತ್ತಷ್ಟು ಅಭಿವೃದ್ಧಿಯಾಗಬೇಕು. ಜಿಲ್ಲೆಯ ಮೂಲಕವೇ ಹಲವು ನಗರಗಳಿಗೆ ರೈಲ್ವೆ ಸಂಪರ್ಕ ಇರುವುದರಿಂದ ಮೇಲ್ದರ್ಜೆಗೇರಿಸುಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರದಿಂದ ಗುರುವಾರದವರೆಗೆ ಕೇಂದ್ರ ಸ್ಥಾನ ದೆಹಲಿಯಲ್ಲೇ ಇದ್ದು, ಕೆಲಸ-ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಆದೇಶವಿರುವುದರಿಂದ ಕೇಂದ್ರ ಸ್ಥಾನದಲ್ಲೇ ಇರಬೇಕಾಗುತ್ತದೆ. ಈ ಬಗ್ಗೆ ಜನರಿಗೆ ಗೊಂದಲ ಬೇಡ ಎಂದರು.
ಗುರುವಾರದಿಂದ ಭಾನುವಾರದವರೆಗೆ ಜನರ ಜೊತೆಯಲ್ಲಿ ಇರುತ್ತೇನೆ ಎಂದ ಸಚಿವರು, ಕಾರ್ಪೊರೇಟರ್ ಆಗಿ, ಶಾಸಕನಾಗಿ, ಸಚಿವನಾಗಿ ಈಗ ಕೇಂದ್ರ ಸರ್ಕಾರದಲ್ಲಿ ಸಚಿವನಾಗಿದ್ದು, ಜಿಲ್ಲೆಯ ಜನತೆ ಆಶೀರ್ವದಿಸಿ ಕೇಂದ್ರ ಸಚಿವನನ್ನಾಗಿ ಮಾಡಿದ್ದಾರೆ.
ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.ತುಮಕೂರು ದಾವಣಗೆರೆಯ ರೈಲ್ವೆ ಮಾರ್ಗ ಕಾಮಗಾರಿಗೆ 600 ಕೋಟಿ ರೂ., ರೈಲ್ವೆ ವಿದ್ಯುದ್ದೀಕರಣಕ್ಕೆ 389 ಕೋಟಿ ರೂ. ಮೀಸಲಿಡಲಾಗಿದೆ. ತುಮಕೂರು ರಾಯದುರ್ಗ, ತುಮಕೂರು ದಾವಣಗೆರೆ ರೈಲ್ವೆ ಮಾರ್ಗಗಳ ಕಾಮಗಾರಿಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದರು.
ಮಾಜಿ ಸಂಸದ ಜಿ.ಎಸ್.ಬಸವರಾಜು ಅವರ ಕನಸಿನಂತೆ ಬಾಕಿ ಉಳಿದಿರುವ ರಿಂಗ್ ರೋಡ್, ವಸಂತ ನರಸಪುರ, ಮದ್ರಾಸ್ ಕಾರಿಡಾರ್ ರಸ್ತೆಗೆ ಶೀಘ್ರ ಚಾಲನೆ ನೀಡಲಾಗುವುದು. ಶಿರಾ ಮತ್ತು ಬೆಂಗಳೂರಿನ ಮಾದವರವರೆಗಿನ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಇರುತ್ತದೆ. ಇದನ್ನು ಸರಿಪಡಿಸಲು ನೂತನ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.ಶಾಸಕ ಜ್ಯೋತಿಗಣೇಶ್, ಬಿಜೆಪಿ ಮುಖಂಡರು, ಕಾರ್ಯಕರ್ತರು ಜತೆಯಲ್ಲಿದ್ದರು.