ಮುಂಬೈ,ಜು.8- ವಾಣಿಜ್ಯ ನಗರಿ ಮುಂಬೈನಲ್ಲಿ ನಿನ್ನೆ ಸುರಿದ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರೈಲು ಮತ್ತು ವಿಮಾನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.ಭಾರೀ ಮಳೆಯಿಂದಾಗಿ ಮುಂಬೈನ ಪ್ರಮುಖ ರಸ್ತೆಗಳು, ರೈಲು ಮಾರ್ಗಗಳು ನೀರು ತುಂಬಿಕೊಂಡಿದ್ದು, ಸಂಚಾರದಲ್ಲಿ ಭಾರಿ ವ್ಯತ್ಯಾಸವಾಗಿದೆ. ಹವಾಮಾನ ವೈಪರಿತ್ಯದಿಂದ ವಿಮಾನ ಸಂಚಾರದಲ್ಲೂ ವ್ಯತ್ಯಯಗೊಂಡಿರುವುದರಿಂದ ಜನರು ಪರದಾಡುವಂತಾಗಿದೆ.
ಹವಾಮಾನ ಇಲಾಖೆ ಪ್ರಕಾರ ಇಂದು ಕೂಡ ಇಡೀ ದಿನ ಭಾರೀ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಮುಂಬೈನಲ್ಲಿ ನಿನ್ನೆ ಒಂದೇ ದಿನ ದಾಖಲೆಯ 300 ಮಿ.ಮೀ. ಮಳೆಯಾಗಿದೆ. ಮಧ್ಯಾಹ್ನ 1 ಗಂಟೆಯಿಂದ 7 ಗಂಟೆಯವರೆಗೆ ಅಂದರೆ ಸುಮಾರು 6 ಗಂಟೆಗಳಲ್ಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಳೆಯಾಗಿದೆ.
ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳೆಲ್ಲಾ ಕೆರೆಯಂತಾಗಿದ್ದು, ಹಲವಾರು ಬಡಾವಣೆಗಳ ತಗ್ಗುಪ್ರದೇಶಗಳಲ್ಲಿ ಮನೆಗೆ ನುಗ್ಗಿ ಅವಾಂತರ ಸಷ್ಟಿಸಿದೆ.ಭಾರೀ ಮಳೆಯಿಂದಾಗಿ ರೈಲು ಮಾರ್ಗಳಲ್ಲಿ ನೀರು ತುಂಬಿದೆ. ಕೆಲವು ಕಡೆ ಮಣ್ಣು ಕುಸಿದಿದ್ದು, ಮರವೊಂದು ಹಳಿಗಳ ಮೇಲೆ ಬಿದ್ದಿದೆ. ಇದರಿಂದ ರೈಲು ಸೇವೆ ಅಪಾಯಕಾರಿ ಎಂಬ ಕಾರಣಕ್ಕೆ ಕೆಲವು ಮಾರ್ಗಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾಸರ ಮತ್ತು ಟಿಟ್ವಾಲಾ ನಡುವಿನ ರೈಲು ಸಂಚಾರ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ವಸಿಂದ್ ಮತ್ತು ಖಾಡ್ವಾಲಿ ರಸ್ತೆ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಅಲ್ಲದೇ ದೂರದ ರೈಲು ಸೇವೆಗಳಿಗೆ ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.