ಬೆಂಗಳೂರು,ಜು.9- ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ನು ಮುಂದೆ ಎಲ್ಲೆಂದರಲ್ಲಿ ಕಸ ಹಾಕುವವರಿಗೆ ನೋಟೀಸ್ ಕೊಟ್ಟು ಕೇಸು ದಾಖಲಿಸುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಡೆಂಘೀ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವರು ತ್ಯಾಜ್ಯವನ್ನು ತಂದು ರಸ್ತೆಗೆ ಹಾಕುತ್ತಿದ್ದಾರೆ. ಇಂತಹವರನ್ನು ಗುರುತಿಸಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಹೇಳಿದರು.
ಇನ್ನು ಮುಂದೆ ಹೊಸ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ನಿರ್ಭಯ ಯೋಜನೆಯ ರೀತಿ ಎಲ್ಲಾ ಕಂಬಗಳಿಗೂ ಸಿಸಿಟಿವಿ ಮತ್ತು ಎಲ್ಇಡಿಯನ್ನು ಅಳವಡಿಸಲಾಗುವುದು. ಯಾರೇ ಆದರೂ ರಸ್ತೆಯಲ್ಲಿ ಕಸ ಹಾಕುವುದನ್ನು ಕಂಡರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ.
ತ್ಯಾಜ್ಯದಿಂದಾಗಿ ಸೊಳ್ಳೆ ಉತ್ಪತ್ತಿ ಹೆಚ್ಚಾಗುತ್ತಿದ್ದು, ಡೆಂಘೀ ಹರಡುತ್ತಿದೆ ಎಂದು ಹೇಳಿದರು.ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳಾದ ಪದನಾಭ್ ಹಾಗೂ ಪರಶುರಾಮ್ ಅವರ ಆಡಿಯೋ ಬಹಿರಂಗವಾಗಿರುವುದು ತಮ್ಮ ಗಮನಕ್ಕೆ ಬಂದಿಲ್ಲ. ಪ್ರಕರಣದಲ್ಲಿ ಮುಕ್ತ ಹಾಗೂ ನ್ಯಾಯಸಮತವಾದ ತನಿಖೆ ನಡೆಯುತ್ತಿದೆ. ಈ ಮೊದಲು ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಸಚಿವರಾಗಿದ್ದ ನಾಗೇಂದ್ರ ಅವರಾಗಲೀ, ನಿಗಮದ ಅಧ್ಯಕ್ಷರಾಗಿದ್ದ ಬಸವರಾಜ್ ದದ್ದಲ್ ಅವರಾಗಲೀ ಹಗರಣದಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟವಾಗಿದೆ.
ಮಂತ್ರಿಯಾಗಿದ್ದುಕೊಂಡು ತನಿಖೆ ಎದುರಿಸುವುದು ಸೂಕ್ತ ಅಲ್ಲ ಎಂದು ನಾಗೇಂದ್ರ ಅವರು ತಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾವು ಅವರೊಂದಿಗೆ ಚರ್ಚೆ ನಡೆಸಿದ್ದೇವೆ. ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ತನಿಖೆ ಪ್ರಗತಿಯಲ್ಲಿದೆ ಎಂದರು.
ನಾಗೇಂದ್ರ ಅವರು ತನಿಖೆಗೆ ಸಹಕರಿಸಲಿದ್ದಾರೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ನೋಟೀಸ್ ನೀಡಿದ್ದಾರೆ ಎಂದು ಗೊತ್ತಾಗಿದೆ. ನಾವು ಯಾರೂ ವಿಚಾರಣಾ ಹಂತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ನಮ ಮಂತ್ರಿಯಾಗಲೀ, ಶಾಸಕರಾಗಲೀ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬ ಮಾಹಿತಿ ಇದೆ. ಬೇರೆಯವರು ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ ಎಂದರು. ಅಧಿಕಾರಿಗಳ ನಡುವಿನ ಸಂಭಾಷಣೆಯಲ್ಲೇ ಅಧ್ಯಕ್ಷರಿಗೆ ಈ ವಿಚಾರ ಹೇಳುವುದು ಬೇಡ ಎಂದು ಚರ್ಚೆಯಾಗಿದೆ. ಹಾಗಿದ್ದಾಗ ಹಗರಣದ ಬಗ್ಗೆ ಅಧ್ಯಕ್ಷರಿಗೆ ಮತ್ತು ಸಚಿವರಿಗೆ ಮಾಹಿತಿ ಇರಲಿಲ್ಲ ಎಂದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.