ಬೆಂಗಳೂರು,ಜು.10– ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿಶೇಷ ಉಪಯೋಜನೆಯ 14 ಸಾವಿರ ಕೋಟಿ ರೂ.ಗಳನ್ನು ಕಾಂಗ್ರೆಸ್ ಸರ್ಕಾರ ತನ್ನ ಪಂಚಖಾತ್ರಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿರುವುದರ ಕುರಿತಂತೆ 7 ದಿನಗಳೊಳಗಾಗಿ ಸಮಗ್ರ ವರದಿ ನೀಡುವಂತೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ರಾಜ್ಯಸರ್ಕಾರಕ್ಕೆ ನೋಟೀಸ್ ನೀಡಿದೆ.
ಆಯೋಗ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಬಳಕೆಯಾಗಬೇಕಾದ ಹಣವನ್ನು ಅನ್ಯ ಕಾರ್ಯಗಳಿಗೆ ಬಳಸಲಾಗಿದೆ ಎಂಬ ಆಕ್ಷೇಪ ವ್ಯಕ್ತಪಡಿಸಿದೆ.
ಆಯೋಗ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಮಾಧ್ಯಮದವರ ವರದಿ ಆಧರಿಸಿ ನೋಟೀಸ್ ಜಾರಿ ಮಾಡಿದೆ. ಕರ್ನಾಟಕ ಪ.ಜಾತಿ ಉಪಯೋಜನೆ ಮತ್ತು ಪ.ಪಂಗಡಗಳ ಉಪಯೋಜನೆಗೆ ಬಳಕೆಯಾಗಬೇಕಾಗಿದ್ದ 14,730.53 ಕೋಟಿ ರೂ.ಗಳನ್ನು 5 ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ರಾಷ್ಟ್ರೀಯ ಆಯೋಗ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಪರಿಶಿಷ್ಟ ಜಾತಿಗಳ ಅಭಿವೃದ್ಧಿ ಯೋಜನೆಗಳ ಮೇಲೆ ನಿಗಾ ಇರಿಸಿದೆ. ಎಸ್‌ಸಿಪಿ ಮತ್ತು ಕೇಂದ್ರ ಸರ್ಕಾರದ ವಿಶೇಷ ನೆರವುಗಳ ಬಳಕೆಯನ್ನು ಪರಿಶೀಲಿಸುತ್ತದೆ. ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಿರುವ ಬಗ್ಗೆ ಆಯೋಗಕ್ಕೆ 7 ದಿನದೊಳಗಾಗಿ ವರದಿ ನೀಡಬೇಕು ಎಂದು ನೋಟೀಸ್‌ನಲ್ಲಿ ಸೂಚಿಸಲಾಗಿದೆ.