Tuesday, July 23, 2024
Homeಬೆಂಗಳೂರುಚಿನ್ನದ ಆಭರಣ ಕದ್ದಿದ್ದ ಮಹಿಳಾ ಸ್ವಿಮಿಂಗ್‌ ಕೋಚ್ ಮತ್ತು ಸ್ನೇಹಿತನ ಸೆರೆ

ಚಿನ್ನದ ಆಭರಣ ಕದ್ದಿದ್ದ ಮಹಿಳಾ ಸ್ವಿಮಿಂಗ್‌ ಕೋಚ್ ಮತ್ತು ಸ್ನೇಹಿತನ ಸೆರೆ

ಬೆಂಗಳೂರು, ಜು.10- ಸ್ವಿಮಿಂಗ್‌ ಪೂಲ್‌ನ ಡ್ರೆಸ್ಸಿಂಗ್‌ ರೂಮ್‌ನ ಲಾಕರ್‌ನಲ್ಲಿಟ್ಟಿದ್ದ ಮಹಿಳೆಯೊಬ್ಬರ 3 ಲಕ್ಷ ಮೌಲ್ಯದ ಮಾಂಗಲ್ಯ ಸರ ಹಾಗೂ ಬಳೆಗಳನ್ನು ಕಳವು ಮಾಡಿದ್ದ ಸ್ವಿಮಿಂಗ್‌ಪೂಲ್‌ನ ಮಹಿಳಾ ಕೋಚ್‌ ಹಾಗೂ ಆಕೆಯ ಸ್ನೇಹಿತನನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಲಘಟ್ಟಪುರದ ಕೆಂಬತ್ತಹಳ್ಳಿರುವ ಸ್ವಿಮಿಂಗ್‌ ಪೂಲ್‌ ಒಂದಕ್ಕೆ ತಮ ಮಗಳೊಂದಿಗೆ ಮಹಿಳೆ ಸ್ವಿಮಿಂಗ್‌ ಕ್ಯಾಂಪ್‌ಗೆ ತೆರಳಿದ್ದು, ಈ ವೇಳೆ ಧರಿಸಿದ್ದ ಚಿನ್ನದ ಮಾಂಗಲ್ಯ ಹಾಗೂ ಎರಡು ಚಿನ್ನದ ಬಳೆಗಳನ್ನು ತನ್ನ ಬಟ್ಟೆಯ ಬ್ಯಾಗ್‌ನಲ್ಲಿಟ್ಟು , ಸ್ವಿಮಿಂಗ್‌ ಪೂಲ್‌ ಆವರಣದಲ್ಲಿರುವ ಡ್ರೆಸ್ಸಿಂಗ್ ರೂಮ್‌ ಲಾಕರ್‌ನಲ್ಲಿಟ್ಟು ಈಜು ಕೊಳಕ್ಕೆ ತೆರಳಿದ್ದಾರೆ.

ಈಜು ಮುಗಿಸಿಕೊಂಡು ಲಾಕರ್‌ ತೆಗೆದು ನೋಡಿದಾಗ ಆಭರಣಗಳು ಕಾಣೆಯಾಗಿದ್ದವು. ಇದರಿಂದ ಆತಂಕಗೊಂಡ ಮಹಿಳೆ ತಲಘಟ್ಟಪುರ ಠಾಣೆಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದ ಪೊಲೀಸರು ಈಜುಕೊಳದಲ್ಲಿ ಕೋಚ್‌ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಯು ಕಳವು ಮಾಡಿದ್ದ ಒಡವೆಗಳನ್ನು ಆಕೆಯ ಸ್ನೇಹಿತನಿಗೆ ನೀಡಿರುವುದಾಗಿ ತಿಳಿಸಿದ್ದು , ಸ್ನೇಹಿತನನ್ನು ವಶಕ್ಕೆ ಪಡೆದು ಆತನಿಂದ 46 ಗ್ರಾಂ ತೂಕದ ಒಂದು ಮಾಂಗಲ್ಯದ ಸರ ಹಾಗೂ ಎರಡು ಚಿನ್ನದ ಬಳೆಗಳನ್ನು ವಶಕ್ಕೆ ಪಡೆದು ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

RELATED ARTICLES

Latest News