ಬೆಂಗಳೂರು,ಜು.11-ವಾಲೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಮಾತ್ರವಲ್ಲದೆ ಇನ್ನೂ ಅನೇಕರು ಸಿಕ್ಕಿಬೀಳಲಿದ್ದಾರೆ, ಕಾದು ನೋಡಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ನಾಗೇಂದ್ರ ಮಾತ್ರವಲ್ಲದೆ ಘಟಾನುಘಟಿ ನಾಯಕರ ಕೊರಳಿಗೆ ಉರುಳಾಗಲಿದೆ. ಎಲ್ಲವನ್ನೂ ಕಾಲವೇ ನಿರ್ಧರಿಸಲಿದೆ ಎಂದು ಸೂಚ್ಯವಾಗಿ ತಿಳಿಸಿದರು.
ಬೇನಾಮಿಯಾಗಿ ಅನೇಕರ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ. ಉಜೂರು ಎಂಬುವವರಿಗೆ ಎರಡು ಖಾತೆಗಳಿಂದ ಹಣ ವರ್ಗಾವಣೆಯಾಗಿರುವುದೇ ನಿದರ್ಶನ. ಇದು ಬಹುದೊಡ್ಡ ಹಗರಣವಾಗಿದ್ದು, ಸರ್ಕಾರಕ್ಕೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಲಿದೆ ಎಂದರು.
ಎಸ್‌ಸಿ/ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿಗಳಿಗೆ ಬಳಸಿಕೊಂಡಿರುವುದಕ್ಕೆ ಸ್ವತಃ ರಾಷ್ಟ್ರೀಯ ಪರಿಶಿಷ್ಟ ಜಾತಿಯ ಆಯೋಗ ಆಕ್ಷೇಪಿಸಿ ವಾರದೊಳಗೆ ವರದಿ ಕೊಡುವಂತೆ ಸೂಚನೆ ನೀಡಿದೆ. ಇದು ದಲಿತ ವಿರೋಧಿ ಸರ್ಕಾರ ಎನ್ನುವುದಕ್ಕಿಂತ ಬೇರೇನು ನಿದರ್ಶನ ಬೇಕು? ಎಂದು ಪ್ರಶ್ನಿಸಿದರು.
ಮಾತೆತ್ತಿದರೆ ನಾನು ಅಹಿಂದ ನಾಯಕ ಎನ್ನುವ ಸಿದ್ದರಾಮಯ್ಯನವರು ತಮ ಬೆನ್ನನ್ನು ತಾವೇ ಚಪ್ಪರಿಸಿಕೊಳ್ಳುತ್ತಿದ್ದಾರೆ. ತಮ ಬಗ್ಗೆ ತಾವೇ ಜೈಕಾರವನ್ನೂ ಹಾಕಿಕೊಳ್ಳುತ್ತಿದ್ದಾರೆ. ನಿಜವಾಗಿಯೂ ಕಾಂಗ್ರೆಸ್ ಸರ್ಕಾರ ದಲಿತರಿಗೆ ಚೂರಿ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತರಿಗೆ ಮೀಸಲಿಟ್ಟ 11 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗಳಿಗೆ ಈ ಹಿಂದೆಯೂ ಬಳಸಿಕೊಂಡಿದ್ದರು. ಇದೀಗ 14 ಸಾವಿರ ಕೋಟಿ ಹಣವನ್ನು ಬಳಸಿಕೊಂಡಿದ್ದಾರೆ. ಒಟ್ಟಾರೆ 24 ಸಾವಿರ ಕೋಟಿ ರೂ. ಹಣ ಬಳಕೆಯಾಗಿದೆ. ಇದು ದಲಿತರಿಗೆ ಮಾಡಿದ ಅನ್ಯಾಯವಲ್ಲವೇ? ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಮುಡಾ ಹಗರಣದಲ್ಲಿ ಸ್ವತಃ ಸಿದ್ದರಾಮಯ್ಯನವರ ಕುಟುಂಬದವರೇ ಶಾಮೀಲಾಗಿದ್ದಾರೆ. ಈಗ ಇದನ್ನೂ ಕೂಡ ತಿಪ್ಪೆ ಸಾರುವ ಕೆಲಸ ನಡೆಯುತ್ತಿದೆ. ಇದರ ವಿರುದ್ಧ ಮೈಸೂರಿನಲ್ಲಿ ನಾಳೆ ಪಕ್ಷದ ವತಿಯಿಂದ ಬೃಹತ್ ಹೋರಾಟ ನಡೆಸುವುದಾಗಿ ವಿಜಯೇಂದ್ರ ಹೇಳಿದರು.