Tuesday, July 23, 2024
Homeರಾಜ್ಯಪತ್ರಕರ್ತರ ಪ್ರಶ್ನೆಗಳ ಸುರಿಮಳೆಗೆ ರೊಚ್ಚಿಗೆದ್ದು ರೇಗಾಡಿದ ಸಿಎಂ ಸಿದ್ದರಾಮಯ್ಯ

ಪತ್ರಕರ್ತರ ಪ್ರಶ್ನೆಗಳ ಸುರಿಮಳೆಗೆ ರೊಚ್ಚಿಗೆದ್ದು ರೇಗಾಡಿದ ಸಿಎಂ ಸಿದ್ದರಾಮಯ್ಯ

ಮೈಸೂರು,ಜು.11– ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖಾ ವರದಿ ತಮ ಕೈ ಸೇರಿಲ್ಲ ಎಂದು ಹೇಳುವ ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಳೆ ಕಳೆದುಕೊಂಡು ಏರಿದ ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಹಗರಣ ಕುರಿತು ತನಿಖೆಗೆ ಎಸ್ಐಟಿ ರಚಿಸಲಾಗಿದೆ. ಸರ್ಕಾರಕ್ಕೆ ಇನ್ನೂ ವರದಿ ಬಂದಿಲ್ಲ.

ಪ್ರಾಥಮಿಕ ವರದಿಯೂ ಇಲ್ಲ, ಅಂತಿಮ ವರದಿಯೂ ನಮಗೆ ತಲುಪಿಲ್ಲ. ಪೂರ್ಣ ಪ್ರಮಾಣದ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹೊಣೆಗಾರಿಕೆಯನ್ನು ನಿಗದಿಪಡಿಸಲಾಗುವುದು ಎಂದು ಹೇಳಿದರು.

ಖಜಾನೆಯಿಂದ ಹಣ ವರ್ಗಾವಣೆಯಾಗಿದೆ ಎಂಬ ಆರೋಪ ಎದುರಾದಾಗ ಆ ರೀತಿಯಾಗಲು ಸಾಧ್ಯವಿಲ್ಲ ಎಂದು ಸಮರ್ಥನೆ ನೀಡಿದರು. ಬಿಜೆಪಿಯವರು ಹೇಳುತ್ತಾರೆ ಎಂಬ ಕಾರಣಕ್ಕೆ ಮಾಧ್ಯಮದವರು ಆ ರೀತಿಯ ಪ್ರಶ್ನೆಗಳನ್ನು ಕೇಳಬಾರದು. ಹಣ ವರ್ಗಾವಣೆಯಾಗಿರುವುದಕ್ಕೆ ದಾಖಲಾತಿ ಎಲ್ಲಿದೆ ಎಂದು ಖಾರವಾಗಿ ಪ್ರಶ್ನಿಸಿದರು.

ಇಲಾಖಾವಾರು ಮತ್ತು ನಿಗಮಗಳಿಗೆ ಹಂಚಿಕೆಯಾಗಿರುವ ಅನುದಾನವನ್ನು ಅಧಿಕಾರಿಗಳು ಅನುದಾನ ಲಭ್ಯತೆ ಆಧಾರದ ಮೇಲೆ ಬಿಡುಗಡೆ ಮಾಡುತ್ತಾರೆ. ನನಗೆ ಅದರ ಮಾಹಿತಿ ಬರುವುದಿಲ್ಲ. ಆ ಕಡತಕ್ಕೆ ನಾನು ಸಹಿಯನ್ನೂ ಹಾಕುವುದಿಲ್ಲ. ಹಣ ವರ್ಗಾವಣೆಯಾಗಿರುವ ಸಂಬಂಧಪಟ್ಟಂತೆ ಎಸ್ಐಟಿ ತನಿಖೆ ನಡೆಯುತ್ತಿದೆ. ಇನ್ನೂ ವರದಿ ಬಂದಿಲ್ಲ ಎಂದು ಹೇಳಿದರು.

ಆರ್ಥಿಕ ಸಚಿವರಾಗಿರುವ ಸಿದ್ದರಾಮಯ್ಯನವರು ಹಗರಣದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ತನಿಖೆ ಬಳಿಕ ನಿರ್ದೋಷಿಯಾದರೆ ಮತ್ತೆ ಮುಖ್ಯಮಂತ್ರಿಯಾಗಲಿ ಎಂದು ಜೆಡಿಎಸ್ನ ಶಾಸಕ ಜಿ.ಟಿ.ದೇವೇಗೌಡರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಅವರು, ಇದರಲ್ಲಿ ಬ್ಯಾಂಕ್ ಅವ್ಯವಹಾರವಾಗಿದೆ. ಹಾಗಿದ್ದ ಮೇಲೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆ ನೀಡಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜೀನಾಮೆ ನೀಡಬೇಕಲ್ಲವೇ? ಎಂದು ತಿರುಗೇಟು ನೀಡಿದರು.

ತನಿಖೆಯೇ ಮುಗಿದಿಲ್ಲ, ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿಲ್ಲ, ಖಜಾನೆಯಿಂದ ಹಣ ವರ್ಗಾವಣೆಯಾಗಿದೆ ಎಂದು ದಾಖಲೆ ಎಲ್ಲಿದೆ? ಎಂದಾಗ ಮಾಧ್ಯಮದವರು ದಾಖಲಾತಿ ತೋರಿಸಿದರು. ಇದು ಆದೇಶ ಅಲ್ಲ ಎಂದು ತಳ್ಳಿ ಹಾಕಿದರು. ಎಸ್ಐಟಿ ದಾಖಲಾತಿ ನೀಡಿದೆ ಎನ್ನುತ್ತಿದ್ದಂತೆ ಸಿಟ್ಟಾದ ಸಿದ್ದರಾಮಯ್ಯನವರು, ಎಲ್ಲಿದೆ, ಯಾವ ವರದಿ ಬಂದಿದೆ ಎಂದು ಏರಿದ ಧ್ವನಿಯಲ್ಲಿ ಕೆಂಡಾಮಂಡಲವಾದರು.

ದಾಖಲಾತಿ ತೋರಿಸುವುದಾಗಿ ಮಾಧ್ಯಮದವರು ಹೇಳುತ್ತಿದ್ದಂತೆ ಎಸ್ಐಟಿಯವರು ವಿಶ್ಲೇಷಣೆ ನಡೆಸಿ ತನಿಖಾ ವರದಿ ನೀಡಲಿ. ನಂತರ ಜವಾಬ್ದಾರಿ ನಿಗದಿ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದರು.ಮುಡಾ ಹಗರಣದಲ್ಲಿ ಯಾವುದೇ ಲೋಪವಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರಷ್ಟೇ ಅಲ್ಲ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೇ ಬಂದು ಪ್ರತಿಭಟನೆ ಮಾಡಲಿ. ಅವರು ರಾಜಕೀಯವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಅದಕ್ಕೆ ರಾಜಕೀಯವಾಗಿಯೇ ತಿರುಗೇಟು ನೀಡಲು ನಮಗೂ ಗೊತ್ತಿದೆ ಎಂದು ಹೇಳಿದರು.

ಬದಲಿ ನಿವೇಶನ ಮಂಜೂರಾತಿಯಲ್ಲಿ ನಿಯಮ ಬಾಹಿರವಾಗಿ ಏನು ನಡೆದಿದೆ ಎಂದು ಬಿಜೆಪಿಯವರು ಸಾಬೀತು ಪಡಿಸಬೇಕು. 2005 ರಲ್ಲಿ ಕೃಷಿ ಭೂಮಿಯನ್ನು ವಸತಿ ಉದ್ದೇಶಕ್ಕೆ ಪರಿವರ್ತನೆ ಮಾಡಿಕೊಡಲಾಗಿದೆ. 2010 ರಲ್ಲಿ ದಾನಪತ್ರದಲ್ಲಿ ಕೃಷಿ ಭೂಮಿಯೆಂದೇ ನಮೂದು ಮಾಡಲಾಗಿದೆ. ಅದಕ್ಕೂ, ನಮಗೂ ಸಂಬಂಧವಿಲ್ಲ. ನನ್ನ ಭಾವಮೈದುನ ಮಲ್ಲಿಕಾರ್ಜುನ ಸ್ವಾಮಿ ದಾನಪತ್ರ ನೀಡಿದ್ದಾರೆ. ಅದರಲ್ಲಿ ನಿಯಮಾವಳಿ ಉಲ್ಲಂಘನೆಯೇನಿಲ್ಲ. ಒಂದು ವೇಳೆ ಕೃಷಿಭೂಮಿಯೆಂದು ನಮೂದಾಗಿದ್ದರೂ ಕೂಡ ಅದು ದೊಡ್ಡ ಅಪರಾಧವೇನಲ್ಲ ಎಂದರು.

2010 ರವರೆಗೂ ಭೂಮಿ ಕೃಷಿ ಮಾದರಿಯಲ್ಲಿಯೇ ಇತ್ತು. 2014 ರಲ್ಲಿ ಮುಡಾ ನಿವೇಶನವನ್ನಾಗಿ ಅಭಿವೃದ್ಧಿಪಡಿಸಿ ಹಂಚಿದೆ. ಅದನ್ನು ಹಾಗೆಯೇ ಬಿಟ್ಟುಬಿಡಬೇಕೆ?, ಬದಲಿ ನಿವೇಶನ ಕೇಳಿದ್ದೇವೆ, ನಿರ್ದಿಷ್ಟ ಜಾಗದಲ್ಲಿ ಕೊಡಿ ಎಂದು ಕೇಳಿಲ್ಲ, ಮುಡಾದಲ್ಲಿ ಎಲ್ಲಾ ಪಕ್ಷದವರೂ ಸದಸ್ಯರಿದ್ದು, ಅವರದೇ ಸರ್ಕಾರವಿತ್ತು. ನಿವೇಶನ ನೀಡಿದ್ದು ಅವರದೇ ಆಡಳಿತಾವಧಿಯಲ್ಲಿ. ಇದಕ್ಕೆ ಹೊಣೆ ಯಾರು? ಎಂದು ಪ್ರಶ್ನಿಸಿದರು.

ಕಾನೂನು ಪ್ರಕಾರ, ಬದಲಿ ಜಮೀನು ನೀಡಿದ್ದಾರೆ. ಇದೇ ರೀತಿಯ ಸುಂದರಮ ಎಂಬುವವರ ಪ್ರಕರಣದಲ್ಲಿ ಹೈಕೋರ್ಟ್ ನಿರ್ದೇಶನ ನೀಡಿ ಬದಲಿ ನಿವೇಶನಕ್ಕೆ ಆದೇಶಿಸಿದೆ. ಮುಡಾಗೆ ದಂಡವನ್ನೂ ವಿಧಿಸಿದೆ. ಅವರ ಆಡಳಿತದಲ್ಲಿ ಮುಡಾ ತಪ್ಪು ಮಾಡಿದರೆ ಅದಕ್ಕೆ ಸಿದ್ದರಾಮಯ್ಯ ಹೊಣೆಯೇ? ಎಂದು ಪ್ರಶ್ನಿಸಿದರು.

ಭೂ ಸ್ವಾಧೀನ ಹೊಸ ಕಾಯಿದೆಯ ಪ್ರಕಾರ, ಮೂರು ಪಟ್ಟು ಪರಿಹಾರ ನೀಡಬೇಕಾಗುತ್ತದೆ. ಅದರನುಸಾರ 62 ಕೋಟಿ ರೂ. ಮೌಲ್ಯವಾಗುತ್ತದೆ ಎಂದು ಹೇಳಿದ್ದೇನೆ. 2021 ರಲ್ಲಿ ನಾನು ವಿರೋಧಪಕ್ಷದ ನಾಯಕನಾಗಿದ್ದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯೂ ಆಗಿರಲಿಲ್ಲ ಎಂದು ಹೇಳಿದರು.

ಚುನಾವಣಾ ಆಯೋಗಕ್ಕೆ ಪ್ರಮಾಣಪತ್ರದಲ್ಲಿ ಇದನ್ನು ನಮೂದಿಸದೇ ಇರುವ ಬಗ್ಗೆ ಮಾಡಲಾಗಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಆಯೋಗ ನೋಟೀಸ್ ಕೊಡಲಿ. ನಾನು ಉತ್ತರ ಕೊಡುತ್ತೇನೆ ಎಂದರು.ಹಿಂದುಳಿದ ವರ್ಗದ ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ ಎಂಬ ಹೊಟ್ಟೆಉರಿ ತಾಳಲಾಗದೆ, ಈ ರೀತಿಯ ಸಂಚು ಮಾಡುತ್ತಿದ್ದಾರೆ. ನಾನು ಇದಕ್ಕೆಲ್ಲಾ ಹೆದರುವುದಿಲ್ಲ ಎಂದು ತಿರುಗೇಟು ನೀಡಿದರು.

RELATED ARTICLES

Latest News