ಬೆಂಗಳೂರು,ಜು.22- ಕಾವೇರಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಮುಂದಿನ ವರ್ಷದಿಂದ ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ತಾವು ಕೆಆರ್‍ಎಸ್‍ಗೆ ಭೇಟಿ ನೀಡಿ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರ ಜೊತೆ ಪರಿಶೀಲನೆ ನಡೆಸಿದ್ದು, ಬಾಗಿನ ಅರ್ಪಿಸಿದ್ದೇವೆ. ಕಾವೇರಿ ನೀರು ಬಿಡುಗಡೆ ಕುರಿತು ಮಾಹಿತಿ ಪಡೆದುಕೊಂಡಿದ್ದೇವೆ ಎಂದರು.
ನೀರು ನಿರ್ವಹಣಾ ಸಮಿತಿ ಜು.11 ರಿಂದ 31 ರವರೆಗೆ ಪ್ರತಿದಿನ 1 ಟಿಎಂಸಿಯಂತೆ 20 ಟಿಎಂಸಿ ನೀರು ಹರಿಸಲು ಆದೇಶ ನೀಡಿತ್ತು. ಈವರೆಗೂ ಬಿಳುಗುಂಡ್ಲುವಿಗೆ 30 ಟಿಎಂಸಿ ಹರಿದುಹೋಗಿದೆ ಎಂದು ವಿವರಿಸಿದರು.
ಸಾಮಾನ್ಯ ವರ್ಷದಲ್ಲಿ ತಮಿಳುನಾಡಿಗೆ 40.14 ಟಿಎಂಸಿ ನೀರು ಬಿಡಬೇಕು. ಪ್ರಸಕ್ತ ಉತ್ತಮ ಮಳೆಯಾಗುತ್ತಿರುವುದರಿಂದ 51 ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿದೆ. 60 ಟಿಎಂಸಿಯಷ್ಟು ನೀರು ಬಿಡುವ ಅವಕಾಶಗಳಿವೆ ಎಂದು ಹೇಳಿದರು.
ಜೊತೆಗೆ ರೈತರ ಬೆಎಗಳಿಗೆ ನೀರು ಬಿಡುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೃಷಿ ಸಚಿವರು ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ ಮತ್ತು 1.81 ಲಕ್ಷ ರೈತರಿಗೆ ಬ್ಯಾಂಕ್‍ನ ಆರ್ಥಿಕ ನೆರವಿಗೆ ಸೂಚನೆ ನೀಡಿದ್ದಾರೆ. ಕಾವೇರಿ ನದಿಪಾತ್ರದಲ್ಲಿ 1,457 ಕೆರೆಗಳಿದ್ದು, ಅವುಗಳನ್ನು ತುಂಬಿಸಲು ಕಾಲುವೆಗಳನ್ನು ತೆರೆಯಲಾಗಿದೆ ಎಂದರು.
ಪ್ರತಿವರ್ಷ ಉತ್ತಮ ಮಳೆಯಾಗಲಿ, ನಮ್ಮ ಜಲಾಶಯಗಳು ತುಂಬಲಿ ಎಂಬ ಆಶಯಕ್ಕಾಗಿ ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಕಾರ್ಯಕ್ರಮವನ್ನು ಮುಂದಿನ ವರ್ಷದಿಂದ ನಡೆಸಲು 5, 6 ಜಾಗಗಳನ್ನು ಗುರುತಿಸಲು ಪರಿಶೀಲನಾ ಕಾರ್ಯ ನಡೆಯುತ್ತಿದೆ. ಧಾರ್ಮಿಕ ದತ್ತಿ, ಜಲಸಂಪನ್ಮೂಲ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆಗಳು ಸ್ಥಳ ಪರಿಶೀಲನೆ ಹಾಗೂ ಕಾರ್ಯಕ್ರಮ ಆಯೋಜನೆ ಬಗ್ಗೆ ತಯಾರಿ ನಡೆಸುತ್ತಿವೆ ಎಂದು ಹೇಳಿದರು.
ಕೆಆರ್‍ಎಸ್‍ನ ಬೃಂದಾವನ ಉದ್ಯಾನವನವನ್ನು ಪಿಪಿಪಿ ಮಾದರಿಯಲ್ಲಿ ಉನ್ನತೀಕರಣಗೊಳಿಸಲು ಟೆಂಡರ್ ಕರೆಯಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.