Friday, November 22, 2024
Homeರಾಜ್ಯಬೆಳೆ ಪರಿಹಾರ: ವಿಧಾನಪರಿಷತ್‌ನಲ್ಲಿ ಮಾತಿನ ಚಕಮಕಿ

ಬೆಳೆ ಪರಿಹಾರ: ವಿಧಾನಪರಿಷತ್‌ನಲ್ಲಿ ಮಾತಿನ ಚಕಮಕಿ

ಬೆಂಗಳೂರು,ಜು.24- ರೈತರಿಗೆ ಬೆಳೆ ಪರಿಹಾರ ನೀಡುವ ವಿಷಯದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಿಧಾನಪರಿಷತ್‌ನಲ್ಲಿ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು. ಪ್ರಶ್ನೋತ್ತರ ವೇಳೆ ಕೇಶವಪ್ರಸಾದ್‌ ಅವರು, ರಾಜ್ಯಸರ್ಕಾರ ರೈತರ ಬೆಳೆಪರಿಹಾರ ನೀಡುವಲ್ಲಿ ತಾರತಮ್ಯ ಎಸಗಿದ್ದು, ವಿಫಲವಾಗಿದೆ ಎಂದು ದೂರಿದರು.

ಇದಕ್ಕೆ ಆಕ್ಷೇಪಿಸಿದ ಕಂದಾಯ ಸಚಿವ ಕೃಷ್ಣಭೈರೇಗೌಡ, ನೀವು ರಾಜಕೀಯ ಮಾತನಾಡುತ್ತೀರಿ ಎಂದರೆ ನಮಗೂ ಕೂಡ ಮಾತನಾಡಲು ಬರುತ್ತದೆ ಎಂದು ತಿರುಗೇಟು ನೀಡಿದರು. 1296 ಕೋಟಿ ರಾಜ್ಯದಿಂದಲೂ ಪರಿಹಾರ ಕೊಟ್ಟಿದ್ದೇವೆ. ಕಳೆದ ವರ್ಷ ಕೇಂದ್ರಕ್ಕೆ ಆಂಧ್ರ, ಮಹಾರಾಷ್ಟ್ರದವರು ಪರಿಹಾರ ಕೇಳಿದರೂ ಯಾರಿಗೂ ಕೊಟ್ಟಿಲ್ಲ. ನಾವು ಸುಪ್ರೀಂಕೋರ್ಟ್‌ಗೆ ಹೋಗಿದ್ದಕ್ಕೆ 3,498 ಕೋಟಿ ರೂ. ಪರಿಹಾರ ಸಿಕ್ಕಿದೆ. 4,132 ಕೋಟಿ ರೂ ಬರಪರಿಹಾರಕ್ಕೆ ಖರ್ಚಾಗಿದೆ. ಕೇಂದ್ರ ಸರ್ಕಾರ ಪರಿಹಾರ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ವರ್ಷ ಕೇಂದ್ರ ಸರ್ಕಾರ ಬೆಳೆಪರಿಹಾರವನ್ನು ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಯಾವುದೇ ರಾಜ್ಯಕ್ಕೂ ಒಂದೇ ಒಂದು ನಯಾಪೈಸೆ ಹಣವನ್ನು ಕೊಡಲಿಲ್ಲ. ದೇಶದಲ್ಲೇ ಕರ್ನಾಟಕಕ್ಕೆ 3 ಸಾವಿರಕ್ಕೂ ಹೆಚ್ಚು ಕೋಟಿ ಅನುದಾನ ಬಂದಿದೆ ಎಂದರೆ ಅದಕ್ಕೆ ಸುಪ್ರೀಂಕೋರ್ಟ್‌ ಕಾರಣ ಎಂದು ತಿರುಗೇಟು ನೀಡಿದರು.

ನಾವು ಸುಪ್ರೀಂಕೋರ್ಟ ಕದ ತಟ್ಟಿದ್ದರಿಂದ ವಿಧಿಯಿಲ್ಲದೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನವನ್ನು ಬಿಡುಗಡೆ ಮಾಡಿತು. ಇಲ್ಲದಿದ್ದರೆ ಕರ್ನಾಟಕಕ್ಕೂ ದೊಡ್ಡ ಚೊಂಬು ಸಿಗುತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಂಧ್ರಪ್ರದೇಶ, ಮಹಾರಾಷ್ಟ್ರದಲ್ಲೂ ಬರಗಾಲ ಬಂದಿದ್ದರೂ ಒಂದೇ ಒಂದು ಪೈಸಾ ಹಣವನ್ನು ನೀಡಲಿಲ್ಲ. ನಾವು ನಮಗೆ ಬರಬೇಕಾದ ಹಣವನ್ನು ನೀಡಬೇಕೆಂದು ಒತ್ತಾಯಿಸಿ ನ್ಯಾಯಾಲಯದ ಮೊರೆ ಹೋದೆವು. ನಮಗೆ ನ್ಯಾಯ ಸಿಕ್ಕಿದ್ದರೆ ಅದು ನ್ಯಾಯಾಲಯದಿಂದ ಎಂದು ಹೇಳಿದರು.

ಆಗ ಬಿಜೆಪಿಯ ಸಿ.ಟಿ.ರವಿ, ಭಾರತಿ ಶೆಟ್ಟಿ, ಕೇಶವಪ್ರಸಾದ್‌ ಸೇರಿದಂತೆ ಮತ್ತಿತರರು ಆಕ್ಷೇಪಿಸಿ ಕೇಂದ್ರ ಸರ್ಕಾರವನ್ನು ಎಲ್ಲದಕ್ಕೂ ದೂಷಣೆ ಮಾಡುವುದು ಬೇಡ. 3 ಸಾವಿರ ಕೋಟಿ ರೂ. ಅನುದಾನ ಕೊಟ್ಟಿಲ್ಲವೇ? ಎಂದು ಸಚಿವರನ್ನು ಪ್ರಶ್ನಿಸಿದರು. ಆಗ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಈ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ. ರೈತರಿಗೆ ಬೆಳೆಪರಿಹಾರ ಸಿಗಬೇಕೆಂಬುದು ಎಲ್ಲರ ಆಶಯ. ಇದರಲ್ಲಿ ಯಾರಿಗೂ ತಾರತಮ್ಯ ಎಸಗುವುದು ಬೇಡ. ಸರ್ಕಾರ ಸಮರ್ಪಕವಾಗಿ ಪರಿಹಾರ ನೀಡಲಿ ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಉತ್ತರಿಸಿದ ಕೃಷ್ಣಭೈರೇಗೌಡ, ನಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದಿನ ಎಲ್ಲಾ ಸರ್ಕಾರಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಪರಿಹಾರವನ್ನು ನೀಡಿದ್ದೇವೆ. ನಾವು ಈವರೆಗೂ ಒಟ್ಟು 33 ಲಕ್ಷಕ್ಕೂ ಅಧಿಕ ರೈತರಿಗೆ ಪರಿಹಾರ ಕೊಟ್ಟಿದ್ದೇವೆ. ಅಂದರೆ ಹಿಂದಿನ ಸರ್ಕಾರ ನೀಡಿದ್ದಕ್ಕಿಂತಲೂ ನಾವು ದುಪ್ಪಟ್ಟು ಕೊಟ್ಟಿದ್ದೇವೆ. ಬೆಳೆ ಪರಿಹಾರ ನೀಡಬೇಕಾದರೆ ಡಿಜಿಟಲ್‌ ವ್ಯವಸ್ಥೆಯನ್ನು ಮಾಡಿದ್ದೇವೆ. ಇದಕ್ಕಾಗಿ ವಿಶೇಷವಾದ ಆ್ಯಪ್‌ ಅನುಷ್ಠಾನ ಮಾಡಲಿದೆ. ರೈತರು ಬೆಳೆ ಬೆಳೆದಿದ್ದಾರೋ, ಇಲ್ಲವೋ ಎಂಬುದನ್ನು ಇದು ಖಾತರಿಪಡಿಸುತ್ತದೆ. ಶೇ.33 ಕ್ಕಿಂತಲೂ ಹೆಚ್ಚು ಬೆಳೆನಷ್ಟವಾಗಿದ್ದರೆ ಪರಿಹಾರ ನೀಡುತ್ತೇವೆ ಎಂದು ಹೇಳಿದರು.

RELATED ARTICLES

Latest News