ಬೆಂಗಳೂರು,ಜು.29- ಮುಡಾ, ವಾಲ್ಮೀಕಿ ಸೇರಿದಂತೆ ವಿವಿಧ ಪ್ರಕರಣವನ್ನು ವಿರೋಧಿಸಿ ಬಿಜೆಪಿ-ಜೆಡಿಎಸ್ ಪಕ್ಷಗಳು ನಡೆಸುವ ಪಾದಯಾತ್ರೆಗೆ ಅನುಮತಿ ನೀಡುವುದಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಪಾದಯಾತ್ರೆ ಮಾಡಿಕೊಳ್ಳಲಿ. ಆದರೆ ಅಧಿಕೃತವಾಗಿ ನಾವು ಅನುಮತಿ ನೀಡುವುದಿಲ್ಲ. ಈ ಹಿಂದೆ ನಾವು ಪಾದಯಾತ್ರೆ ಮಾಡುವಾಗಲೂ ಅವರು ಅನುಮತಿ ನೀಡಿರಲಿಲ್ಲ. ಅವರ ಪಾದಯಾತ್ರೆಗೆ ತಡೆ ಮಾಡುವುದಿಲ್ಲ. ಅಗತ್ಯವಾದ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ತಿಳಿಸಿದರು.
ಜೆಡಿಎಸ್-ಬಿಜೆಪಿಗೆ ಪ್ರತಿಯಾಗಿ ಕಾಂಗ್ರೆಸ್‌ನಿಂದ ಹೋರಾಟ ನಡೆಸುವ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ರಣನೀತಿ ರೂಪಿಸುತ್ತಾರೆ. ರಾಜಕೀಯವಾಗಿ ನಾವೂ ಕೂಡ ಉತ್ತರ ನೀಡಲೇಬೇಕಿದೆ. ವಿಪಕ್ಷಗಳು ಇದನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ. ನಾವು ರಾಜಕೀಯವಾಗಿಯೇ ಮಾತನಾಡುತ್ತೇವೆ ಎಂದರು.
ಮುಡಾ ನಿವೇಶನ ಹಂಚಿಕೆ ಕಾನೂನು ಪ್ರಕಾರವಾಗಿಯೇ ನಡೆದಿದೆ. ಸೈಟುಗಳ ಹಂಚಿಕೆಯಲ್ಲಿ ನಿಯಮ ಪಾಲನೆಯಾಗಿಲ್ಲ ಎಂಬ ಅಭಿಪ್ರಾಯ ಬಂದಿದ್ದರಿಂದಲೇ ತನಿಖೆಗೆ ನ್ಯಾಯಾಂಗ ಆಯೋಗ ರಚಿಸಲಾಗಿದೆ. ವರದಿಯ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬಿಜೆಪಿಯವರು ಅಲ್ಲಿಯವರೆಗೂ ಸಮಾಧಾನದಿಂದ ಇರಲಾಗದೇ ರಾಜಕೀಯ ಮಾಡುತ್ತಿದ್ದಾರೆ ಎಂದು ಪರಮೇಶ್ವರ್ ವಾಗ್ದಾಳಿ ನಡೆಸಿದರು.
ಖಾಸಗಿ ಕಂಪನಿಗಳು ರಾಜ್ಯದಿಂದ ಹೊರಹೋಗುತ್ತಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಗೃಹಸಚಿವರು, ಖಾಸಗಿ ಕಂಪನಿಗಳು ಅವರದ್ದೇ ಆದ ಕೆಲವು ಆಯ್ಕೆಗಳನ್ನಿಟ್ಟುಕೊಂಡು ಬಂದಿರುತ್ತಾರೆ. ಇಲ್ಲಿಗೆ ಬಂದು ನಂತರ ಅವರಿಗೆ ಬೇಕಾದ ಕಡೆ ಹೋಗುತ್ತಾರೆ ಎಂದು ಸ್ಪಷ್ಟನೆ ನೀಡಿದರು. ಬಿಬಿಎಂಪಿ ಕಸದ ಲಾರಿ ಅಪಘಾತವಾಗಿ ನಿನ್ನೆ ರಾತ್ರಿ ಇಬ್ಬರು ಮೃತಪಟ್ಟಿದ್ದಾರೆ. ಇದು ದುರದೃಷ್ಟಕರ ಘಟನೆ. ಬಿಬಿಎಂಪಿಯ ವತಿಯಿಂದ ಮೃತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾದ ಮಾಂಸದ ಮಾದರಿಯನ್ನು ಪಡೆದು ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆಸಲಾಗಿದೆ. ಅದು ನಾಯಿ ಮಾಂಸ ಅಲ್ಲ ಎಂದು ವರದಿ ಬಂದಿದೆ. ಸುಳ್ಳು ಆರೋಪ ಮಾಡಿದ ಪುನೀತ್ ಕೆರಹಳ್ಳಿ ಹಾಗೂ ಸಂಗಡಿಗರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ರಾಜಸ್ಥಾನದಿಂದ ಮಾಂಸ ತರಿಸಿಕೊಂಡಿರುವವರು ತಪ್ಪು ಮಾಡಿದ್ದು ಸಾಬೀತಾದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ.
ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ರಾಜ್ಯಕ್ಕೆ ನೆರವು ನೀಡದೇ ಅನ್ಯಾಯ ಮಾಡಿದೆ. ಆಂಧ್ರ ಪ್ರದೇಶಕ್ಕೆ 15 ಸಾವಿರ ಕೊಟ್ಟಿದೆ. ಇದಕ್ಕೆ ನಮ ವಿರೋಧವಿಲ್ಲ. ಆದರೆ ಅನುದಾನ ಹಂಚಿಕೆ ಸಮಾನಾಂತರವಾಗಿರಬೇಕು. ನಮ ಪಾಲಿಗಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಪರಿಸ್ಥಿತಿ ಬಂದಿತ್ತು. ಭದ್ರಾ ಮೇಲ್ದಂಡೆ ಸೇರಿದಂತೆ ಯಾವುದಕ್ಕೂ ಅನುದಾನ ನೀಡದೇ ಮಲತಾಯಿ ಧೋರಣೆ ಅನುಸರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀತಿ ಆಯೋಗ ಸಭೆಯನ್ನು ಬಹಿಷ್ಕರಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಸಂಬಂಧ ಚೆನ್ನಾಗಿರಬೇಕು. ಕೇಂದ್ರ ಸರ್ಕಾರ ಆಡಳಿತವನ್ನು ಸೌಹಾರ್ದಯುತವಾಗಿ ನಡೆಸಿಕೊಡಬೇಕು. ಮಮತಾಬ್ಯಾನರ್ಜಿ ನೀತಿ ಆಯೋಗದ ಸಭೆಗೆ ಹೋಗಿ ಸಭಾತ್ಯಾಗ ಮಾಡಿದ್ದಾರೆ. ನಾವು ಭಾಗವಹಿಸಿದ್ದರೂ ಅದೇ ರೀತಿ ಮಾಡಬೇಕಿತ್ತೇ? ಎಂದು ಪರಮೇಶ್ವರ್ ಪ್ರಶ್ನಿಸಿದರು.