ಬೆಂಗಳೂರು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಎಂ.ಆರ್. ಮಮತಾ (47) ಅವರು ನಿನ್ನೆ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪ್ರಸ್ತುತ ತುಮಕೂರು ಜಿಲ್ಲಾ ವಾರ್ತಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪತಿ ಹಿರಿಯ ಪತ್ರಕರ್ತ ಎಚ್.ಆರ್.ರವೀಶ್, ಮಗ ಪ್ರಜ್ವಲ್ ಹಾಗೂ ಅಪಾರ ಬಂಧುಗಳನ್ನು ಮಮತಾ ಅವರು ಅಗಲಿದ್ದಾರೆ.
ಬೆಂಗಳೂರಿನ ಅವರ ಮನೆಯಲ್ಲಿ ಇಂದು ಬೆಳಿಗ್ಗೆ 9 ಗಂಟೆಯವರೆಗೂ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತರ ಅವರ ಅಂತ್ಯಕ್ರಿಯೆಯನ್ನು ತುಮಕೂರು ತಾಲ್ಲೂಕು ಆಲನೂರು ಗ್ರಾಮದ ಅವರ ತೋಟದಲ್ಲಿ ಮಧ್ಯಾಹ್ನ ನೆರವೇರಿಸಲಾಯಿತು.
ಮಮತಾ ಅವರು 1999ರಲ್ಲಿ ಈ ಸಂಜೆ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಮಮತಾ ಅವರ ನಿಧನಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರು, ಅಧಿಕಾರಿಗಳು, ಸಿಬ್ಬಂದಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ಪ್ರೆಸ್‌ಕ್ಲಬ್, ಪತ್ರಕರ್ತರ ಸಹಕಾರ ಸಂಘ, ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ತುಮಕೂರು ಜಿಲ್ಲಾ ಪಂಚಾಯತ್ ಸಿಇಒ ಪ್ರಭು, ಎಸ್‌ಪಿ ಕೆ.ವಿ.ಅಶೋಕ್ ಸೇರಿದಂತೆ ವಿವಿಧ ಸಂಘಟನೆಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ.
ಕ್ರಿಯಾಶೀಲ ಅಧಿಕಾರಿಯಾಗಿದ್ದ ಮಮತಾ ಅವರ ಸಾವು ಅತ್ಯಂತ ನೋವಿನ ಸಂಗತಿಯಾಗಿದೆ. ಅವರ ಆತಕ್ಕೆ ಶಾಂತಿ ಸಿಗಲಿ. ಮೃತರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪತ್ರಿಕಾ ಸಂಘಟನೆಗಳ ಮುಖಂಡರು ಪ್ರಾರ್ಥಿಸಿದ್ದಾರೆ.