Sunday, November 24, 2024
Homeರಾಷ್ಟ್ರೀಯ | Nationalಬಾಂಗ್ಲಾ ಬೇಗುದಿ : ಭಾರತದ ಭದ್ರತೆಗೆ ಸರ್ವಪಕ್ಷ ಸಭೆ, ಸರ್ಕಾರದ ಜೊತೆ ನಿಂತ ವಿಪಕ್ಷ

ಬಾಂಗ್ಲಾ ಬೇಗುದಿ : ಭಾರತದ ಭದ್ರತೆಗೆ ಸರ್ವಪಕ್ಷ ಸಭೆ, ಸರ್ಕಾರದ ಜೊತೆ ನಿಂತ ವಿಪಕ್ಷ

ನವದೆಹಲಿ,ಆ.6- ಬಾಂಗ್ಲಾ ದೇಶದಲ್ಲಿ ನಡೆದಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂದು ನಡೆದ ಸರ್ವಪಕ್ಷಗಳ ಸಭೆಯಲ್ಲಿ ಭಾರತ ಸರ್ಕಾರ ತೆಗೆದುಕೊಂಡಿರುವ ಕ್ರಮಗಳಿಗೆ ಪ್ರಶಂಸೆ ವ್ಯಕ್ತವಾಗಿದ್ದು, ಭವಿಷ್ಯದ ಕಾರ್ಯಯೋಜನೆಗಳಿಗೂ ಸರ್ವಾನುಮತದ ಬೆಂಬಲ ವ್ಯಕ್ತವಾಗಿದೆ ಹಾಗೂ ಒಗ್ಗಟ್ಟನ್ನು ಪ್ರದರ್ಶಿಸಲಾಗಿದೆ.

ಕೇಂದ್ರ ವಿದೇಶಾಂಗ ಸಚಿವ ಎಸ್‌‍.ಜಯಶಂಖರ್‌ ಅಧ್ಯಕ್ಷತೆಯಲ್ಲಿ ಇಂದು ನಡೆದ ಸರ್ವಪಕ್ಷಗಳ ಸಭೆಯಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್‌, ಸಚಿವರಾದ ಕಿರಣ್‌ ರಿಜೀಜು, ಜೆ.ಪಿ.ನಡ್ಡಾ, ಎಚ್‌.ಡಿ.ಕುಮಾರಸ್ವಾಮಿ ಭಾಗವಹಿಸಿದ್ದರು.

ಕಾಂಗ್ರೆಸ್‌‍ನಿಂದ ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್‌ ಗಾಂಧಿಯ ಹಾಗೂ ವಿರೋಧಪಕ್ಷದ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.ಸರ್ವಪಕ್ಷ ಸಭೆಯಲ್ಲಿ ಜಯಶಂಕರ್‌ ಮಾತನಾಡಿ, ಭಾರತ , ಬಾಂಗ್ಲಾದೇಶದ ರಾಜಕೀಯ ಕ್ರಾಂತಿ ಹಾಗೂ ಅದರ ನಂತರ ಭಾರತದಲ್ಲಿ ಸೃಷ್ಟಿಯಾಗುವ ಪರಿಸ್ಥಿತಿಯನ್ನು ನಿಭಾಯಿಸಲು ಕೈಗೊಂಡಿರುವ ನಿರ್ಣಯಗಳ ಬಗ್ಗೆ ವಿವರಣೆ ನೀಡಿದ್ದಾರೆ. ಅದೇ ರೀತಿ ಅಲ್ಲಿಂದ ಭಾರತಕ್ಕೆ ವಲಸೆ ಬಂದ ಪ್ರಧಾನಿ ಶೇಖ್‌ ಹಸೀನ ಹಾಗೂ ಇತರ ರಾಜಕೀಯ ನಾಯಕರ ಬಗ್ಗೆ ಯಾವ ರೀತಿ ಕಾಳಜಿ ವಹಿಸಲಾಗಿದೆ ಎಂಬುದನ್ನು ವಿವರಿಸಿದ್ದಾರೆ.

ಶೇಖ್‌ ಹಸೀನ ಅವರು ಸದ್ಯಕ್ಕೆ ಭಾರತದಲ್ಲಿದ್ದಾರೆ. ನಮ ಸರ್ಕಾರ ಅವರಿಗೆ ಸಾಕಷ್ಟು ಕಾಲಾವಕಾಶ ನೀಡಲಿದೆ ಮತ್ತು ಅವರ ಭವಿಷ್ಯದ ಕ್ರಮಗಳ ಬಗ್ಗೆಯೂ ತಿಳಿಯಬಯಸುತ್ತದೆ ಎಂದು ಹೇಳಿದ್ದಾರೆ.

ಭಾರತ ಸರ್ಕಾರ ಬಾಂಗ್ಲಾ ದೇಶದ ಸೇನೆಯೊಂದಿಗೆ ಉತ್ತಮ ಸಂಪರ್ಕದಲ್ಲಿದೆ. ಪರಿಸ್ಥಿತಿಯ ಬೆಳವಣಿಗೆಯನ್ನು ನೋಡಿಕೊಂಡು ಸರಿಯಾದ ಸಮಯದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಬಾಂಗ್ಲಾದಲ್ಲಿ ಸುಮಾರು 20 ಸಾವಿರ ಭಾರತೀಯರಿದ್ದಾರೆ. ಸುಮಾರು 8 ಸಾವಿರ ವಾಪಸ್‌‍ ಭಾರತಕ್ಕೆ ಮರಳಿದ್ದಾರೆ. ಕೇಂದ್ರಸರ್ಕಾರ ಬಾಂಗ್ಲಾ ದೇಶದಲ್ಲಿರುವ ಭಾರತೀಯರ ಸಂಪರ್ಕದಲ್ಲಿದ್ದು, ರಾಯಭಾರಿ ಕಚೇರಿಯಿಂದ ಅಗತ್ಯ ನೆರವು ನೀಡಲಾಗುತ್ತಿದೆ ಎಂದು ಜಯಶಂಕರ್‌ ವಿವರಿಸಿದ್ದಾರೆ.

ಬಾಂಗ್ಲಾ ದೇಶದಲ್ಲಿನ ಅಲ್ಪಸಂಖ್ಯಾತರ ಮೇಲೆ ಗಮನ ಕೇಂದ್ರೀಕರಿಸಲಾಗಿದೆ ಮತ್ತು ಅವರ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.ಸಭೆಯಲ್ಲಿ ರಾಹುಲ್‌ಗಾಂಧಿಯವರು ದೀರ್ಘಾವಧಿ ಹಾಗೂ ಅಲ್ಪಾವಧಿಯ ರಾಜತಾಂತ್ರಿಕ ಕ್ರಮಗಳ ಬಗ್ಗೆ ಪ್ರಶ್ನಿಸಿದ್ದು, ಕೇಂದ್ರ ಸರ್ಕಾರದ ಹೇಳಿಕೆ ಪ್ರಕಾರ ಅಲ್ಲಿ ಪ್ರಗತಿಪರ ಬೆಳವಣಿಗೆಗಳಾಗಿವೆ. ಮುಂದುವರೆದ ಪರಿಸ್ಥಿತಿಯನ್ನು ವಿಶ್ಲೇಷಣಾತಕವಾಗಿ ನೋಡಬೇಕಿದೆ ಎಂದು ಸಲಹೆ ನೀಡಿದ್ದಾರೆ.

ಕೇಂದ್ರ ಸರ್ಕಾರ ಸಾಧ್ಯವಾದ ಸಹಭಾಗಿತ್ವವನ್ನು ವಿದೇಶಿ ನೆರವಿಗೆ ಚಾಚಬೇಕು ಎಂದು ರಾಹುಲ್‌ಗಾಂಧಿ ಸಲಹೆ ನೀಡಿದ್ದಕ್ಕೆ, ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಜಯಶಂಕರ್‌ ಭರವಸೆ ನೀಡಿದ್ದು, ಎಲ್ಲಾ ದೃಷ್ಟಿಕೋನಗಳಿಂದಲೂ ಪರಿಸ್ಥಿತಿಯನ್ನು ಅವಲೋಕಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಭವಿಷ್ಯದಲ್ಲಿ ವಿದೇಶಾಂಗ ನೀತಿಯ ಬಗೆಗಿನ ಪರಿಣಾಮಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು. ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ, ದೌರ್ಜನ್ಯಗಳಾಗುತ್ತಿರುವ ಬಗ್ಗೆ ದೂರುಗಳಿದ್ದು, ಅದರ ಬಗ್ಗೆ ಕಾಳಜಿ ವಹಿಸಬೇಕೆಂದು ರಾಹುಲ್‌ಗಾಂಧಿ ಸಲಹೆ ನೀಡಿದ್ದಾರೆ. ಒಟ್ಟಾರೆ ಸಭೆಯಲ್ಲಿ ಬಾಂಗ್ಲಾ ದೇಶದ ವಿಚಾರವಾಗಿ ಒಗ್ಗಟ್ಟು ಪ್ರದರ್ಶನವಾಗಿದ್ದು, ಭಾರತ ತನ್ನ ಹಿತಾಸಕ್ತಿಗನುಗುಣವಾಗಿ ತೆಗೆದುಕೊಳ್ಳುವ ಕ್ರಮಗಳಿಗೆ ಬೆಂಬಲ ವ್ಯಕ್ತಪಡಿಸುವುದಾಗಿ ವಿಶ್ವಾಸ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ತಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಜಯಶಂಕರ್‌, ಸರ್ವಪಕ್ಷ ಸಭೆಗಳಲ್ಲಾಗಿರುವ ಚರ್ಚೆಗಳನ್ನು ಸಂಸತ್‌ನಲ್ಲಿ ತಿಳಿಸಲಾಗುವುದು. ಬಾಂಗ್ಲಾ ದೇಶದಲ್ಲಿ ಭಾರತ ಕೈಗೊಂಡ ವಿಚಾರಗಳ ಬಗ್ಗೆ ಸಭೆಯಲ್ಲಿ ಸರ್ವಾನುಮತದ ಪ್ರಶಂಸೆ ಹಾಗೂ ಬೆಂಬಲ ದೊರೆತಿದೆ. ಮುಂದಿನ ಬೆಳವಣಿಗೆಗಳ ಬಗ್ಗೆ ನಾವು ಅರ್ಥೈಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಬಾಂಗ್ಲಾ ದೇಶದಲ್ಲಿ ನಿನ್ನೆ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದ್ದು, ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡುವ ನಿಲುವನ್ನು ವಿರೋಧಿಸಿ ಕೆಲ ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಿದ್ದು, ಅದು ಇದ್ದಕ್ಕಿದ್ದಂತೆ ಹಿಂಸಾರೂಪ ಪಡೆದುಕೊಂಡಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಬಾಂಗ್ಲಾ ದೇಶದ ಪ್ರಧಾನಿ ಶೇಖ್‌ ಹಸೀನ ತಮ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಆಗಮಿಸಿ ತಲೆಮರೆಸಿಕೊಂಡಿದ್ದಾರೆ.

RELATED ARTICLES

Latest News