ನವದೆಹಲಿ,ಆ.7- ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ವಿರುದ್ಧ ರಚಿಸಿಕೊಂಡಿದ್ದ ಇಂಡಿಯಾ ಮೈತ್ರಿಕೂಟ ಈ ವಾರ ಸಭೆ ಸೇರುವ ಸಾಧ್ಯತೆ ಇದೆ. ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಣತಂತ್ರ ರೂಪಿಸಲು ವಿಪಕ್ಷಗಳು ಚರ್ಚಿಸಲಿವೆ. ವಿಶೇಷವೆಂದರೆ, ಲೋಕಸಭೆ ಚುನಾವಣೆ ಬಳಿಕದ ಮೊದಲ ಸಭೆ ಇದಾಗಲಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಒಗ್ಗೂಡಿದ ಕಾರಣ ಉತ್ತಮ ಲಿತಾಂಶ ಪಡೆದುಕೊಂಡಿವೆ. ಇದನ್ನು ರಾಜ್ಯ ವಿಧಾನಸಭೆ ಚುನಾವಣಗಳಲ್ಲೂ ಮುಂದುವರಿಸಲು ಬಯಸಿವೆ. ಹೀಗಾಗಿ ಕೂಟವನ್ನು ಮತ್ತಷ್ಟು ಬಲಪಡಿಸುವ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳನ್ನು ತಮ ತೆಕ್ಕೆಗೆ ತೆಗೆದುಕೊಳ್ಳಲು ಕಾರ್ಯತಂತ್ರ ರೂಪಿಸಿವೆ.
ಲೋಕಸಭೆ ಚುನಾವಣಾ ಲಿತಾಂಶದ ಮೊದಲು ಜೂನ್ 1ರಂದು ಇಂಡಿಯಾ ಕೂಟದ ಕೊನೆಯ ಸಭೆ ನಡೆದಿತ್ತು. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಭೆಯಲ್ಲಿ ಭಾಗಿಯಾಗಲಿದೆ ಎಂದು ತಿಳಿದುಬಂದಿದೆ.
ಇಂಡಿಯಾ ಕೂಟದಲ್ಲಿದ್ದರೂ, ಸ್ವತಂತ್ರವಾಗಿ ಚುನಾವಣೆಗಳಲ್ಲಿ ಸ್ಪರ್ಧೆ ಮಾಡುತ್ತಿರುವ ಟಿಎಂಸಿ, ಕಳೆದ ವಿಪಕ್ಷಗಳ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಸಂಸತ್ ಎಲೆಕ್ಷನ್‌ನಲ್ಲಿ ಅದು ಎಲ್ಲ ಸ್ಥಾನಗಳಿಗೆ ಸ್ವತಂತ್ರವಾಗಿ ಸ್ಪರ್ಧಿಸಿ ದೊಡ್ಡ ಗೆಲುವು ಸಾಧಿಸಿದೆ. ಇದೇ ಹುಮಸ್ಸಿನಲ್ಲಿರುವ ಪಕ್ಷದ ನಾಯಕರು ಇಂಡಿಯಾ ಕೂಟದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ.
ಸಭೆಯ ದಿನಾಂಕ ಇನ್ನೂ ಅಂತಿಮವಾಗಿಲ್ಲವಾದರೂ, ಸಂಸತ್ತಿನ ಬಜೆಟ್ ಅಧಿವೇಶನ ಹಿನ್ನೆಲೆ ಹಲವು ವಿರೋಧ ಪಕ್ಷದ ನಾಯಕರು ಈಗಾಗಲೇ ದೆಹಲಿಯಲ್ಲಿದ್ದಾರೆ. ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಮಂಗಳವಾರ ರಾಜಧಾನಿಗೆ ಆಗಮಿಸಿದ್ದಾರೆ. ವಿಪಕ್ಷಗಳ ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ವಿಧಾನಸಭೆ ಚುನಾವಣೆ ಟಾರ್ಗೆಟ್?:
ಇನ್ನೆರಡು ತಿಂಗಳಲ್ಲಿ ಹರಿಯಾಣದ ಜತೆಗೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ, ಲೋಕಸಭೆ ಚುನಾವಣೆಯಲ್ಲಿ ವಿಪಕ್ಷಗಳು ಉತ್ತಮ ಪ್ರದರ್ಶನ ತೋರಿವೆ. ಈ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳನ್ನು ಬಿಜೆಪಿಯಿಂದ ಕಸಿದುಕೊಳ್ಳುವ ನಿರೀಕ್ಷೆಯಲ್ಲಿ ಪ್ರತಿಪಕ್ಷಗಳು ಇವೆ.
ಇಂಡಿಯಾ ಮೈತ್ರಿಕೂಟ ಈಗಾಗಲೇ ಬೆಂಗಳೂರು, ದೆಹಲಿ, ಬಿಹಾರ, ಭೋಪಾಲ್‌ನಲ್ಲಿ 3 ಸಭೆಗಳನ್ನು ನಡೆಸಿದೆ. ಇದು ನಾಲ್ಕನೇ ಸಭೆಯಾಗಲಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 293 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದರೆ, ಇಂಡಿಯಾ ಮೈತ್ರಿಕೂಟ 234 ಸ್ಥಾನಗಳ ಬಲವನ್ನು ಹೊಂದಿದೆ.