Thursday, September 19, 2024
Homeರಾಷ್ಟ್ರೀಯ | National2025ರ ಹೊಸ ಹಜ್‌ ನೀತಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

2025ರ ಹೊಸ ಹಜ್‌ ನೀತಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ,ಆ.7- ಕೇಂದ್ರ ಸರ್ಕಾರವು 2025ರ ಹೊಸ ಹಜ್‌ ನೀತಿ ಬಿಡುಗಡೆ ಮಾಡಿದ್ದು, ಇದರ ಪ್ರಕಾರ, ಈಗ ಭಾರತೀಯ ಹಜ್‌ ಸಮಿತಿಯ ಕೋಟಾವನ್ನು ಶೇಕಡಾ 70ಕ್ಕೆ ಇಳಿಸಲಾಗಿದೆ.ಹೊಸ ನೀತಿಯ ಪ್ರಕಾರ, ಭಾರತಕ್ಕೆ ನಿಗದಿಪಡಿಸಲಾದ ಹಜ್‌ ಯಾತ್ರಿಕರ ಒಟ್ಟು ಕೋಟಾದ 70 ಪ್ರತಿಶತವನ್ನು ಭಾರತದ ಹಜ್‌ ಸಮಿತಿ ನಿರ್ವಹಿಸುತ್ತದೆ. ಅದೇ ಸಮಯದಲ್ಲಿ, ಉಳಿದ 30 ಪ್ರತಿಶತ ಕೋಟಾವನ್ನು ಖಾಸಗಿ ಹಜ್‌ ಗುಂಪು ಸಂಘಟಕರಿಗೆ ನೀಡಲಾಗುತ್ತದೆ.

ಕಳೆದ ವರ್ಷದ ಹಜ್‌ ನೀತಿಯಲ್ಲಿ ಈ ಕೋಟಾ 80-20 ಆಗಿತ್ತು. ಹಜ್‌ ಯಾತ್ರೆಯನ್ನು ಇನ್ನಷ್ಟು ಸುಧಾರಿಸಲು ಸರ್ಕಾರ ನೀತಿ ರೂಪಿಸಿದೆ ಎಂದು ಉತ್ತರ ಪ್ರದೇಶ ಹಜ್‌ ಸಮಿತಿ ಕಾರ್ಯದರ್ಶಿ ಎಸ್‌‍.ಪಿ. ತಿವಾರಿ ಹೇಳಿದ್ದಾರೆ. ಈ ನೀತಿಯ ಅಡಿ ಸರ್ಕಾರಿ ಕೋಟಾವನ್ನು ಕಡಿಮೆ ಮಾಡಲಾಗಿದೆ. ಇದರಿಂದಾಗಿ ರಾಜ್ಯದಿಂದ ಹೋಗುವ ಹಜ್‌ ಯಾತ್ರಿಕರ ಸಂಖ್ಯೆಯೂ ಕಡಿಮೆಯಾಗಬಹುದು.

ಸೌದಿ ಅರೇಬಿಯಾದ ಮೆಕ್ಕಾದ ಹಜ್‌ ಯಾತ್ರೆ ಕೈಗೊಳ್ಳಲು ಪ್ರತಿಯೊಬ್ಬ ಮುಸ್ಲಿಂ ಯಾತ್ರಿಕ ಬಯಸುತ್ತಾನೆ. ಪ್ರತಿವರ್ಷ ಸೀಮಿತ ಸಂಖ್ಯೆಯ ಜನರಿಗೆ ಮಾತ್ರ ಹಜ್‌ ಯಾತ್ರೆಗೆ ಅವಕಾಶ ನೀಡಲಾಗುತ್ತದೆ. ಪ್ರಪಂಚದಾದ್ಯಂತ ಬರುತ್ತಿರುವ ಯಾತ್ರಿಕ ಸಂಖ್ಯೆ ಹೆಚ್ಚಿರುವುದೇ ಇದಕ್ಕೆ ಪ್ರಮುಖ ಕಾರಣ.

2024ರ ಹಜ್‌ ನೀತಿಯಲ್ಲಿ ಆದ್ಯತೆಯ ಕ್ರಮವು 70 ವರ್ಷಕ್ಕಿಂತ ಮೇಲ್ಪಟ್ಟ ಅರ್ಜಿದಾರರಿಗೆ, ಮೆಹ್ರಮ್‌ ಇಲ್ಲದೇ ಪ್ರಯಾಣಿಸುವ ಮಹಿಳೆಯರಿಗೆ ಮತ್ತು ಸಾಮಾನ್ಯ ವರ್ಗಕ್ಕೆ ಒತ್ತು ನೀಡಲಾಗಿದೆ. ಈಗ 2025ಕ್ಕೆ ನೀಡಲಾದ ಹೊಸ ನೀತಿಯಲ್ಲಿ, ಆದ್ಯತೆಯ ಕ್ರಮವನ್ನು 65 ವರ್ಷಕ್ಕಿಂತ ಮೇಲ್ಪಟ್ಟ ಅರ್ಜಿದಾರರು, ಮೆಹ್ರಾಮ್‌ ಇಲ್ಲದ ಮಹಿಳೆಯರು ಮತ್ತು ನಂತರ ಸಾಮಾನ್ಯ ವರ್ಗಕ್ಕೆ ಬದಲಾಯಿಸಲಾಗಿದೆ.

2024ರಲ್ಲಿ ಹಜ್‌ ಯಾತ್ರಿಗಳಿಗೆ ಭಾರತದ ಕೋಟಾ 1,75,025 ಆಗಿತ್ತು. ಇದರಲ್ಲಿ ಈಗ ಹತ್ತು ಪ್ರತಿಶತದಷ್ಟು ಕಡಿಮೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸುಮಾರು 17,500 ಯಾತ್ರಾರ್ಥಿಗಳು ಸರ್ಕಾರಿ ಕೋಟಾದಿಂದ ಹಜ್‌ ಮಾಡಲು ಸಾಧ್ಯವಾಗುವುದಿಲ್ಲ.

ಹೊಸ ನೀತಿ ಅಡಿ ಹಜ್‌ ಸಮಯದಲ್ಲಿ ಸೌದಿ ಅರೇಬಿಯಾದಲ್ಲಿ ಯಾತ್ರಾರ್ಥಿಗಳಿಗೆ ಸಹಾಯ ಮಾಡಲು ಕಳುಹಿಸಲಾದ ಖಾದಿಮುಲ್‌ ಹುಜ್ಜಾಜ್‌ ಅಂದರೆ ಹಜ್‌ ಸೇವಕನ ಪದನಾಮ ಬದಲಾಯಿಸಲಾಗಿದೆ. ಹಜ್‌ ಸೇವಕರನ್ನು ಈಗ ರಾಜ್ಯ ಹಜ್‌ ಇನ್‌್ಸಪೆಕ್ಟರ್‌ಗಳು ಎಂದು ಕರೆಯಲಾಗುತ್ತದೆ.

ಹಜ್‌ ಸೇವಕ ಎಂಬ ಪದನಾಮದಿಂದಾಗಿ ಹಜ್‌ ಯಾತ್ರಾರ್ಥಿಗಳು ತಮನ್ನು ಸೇವಕರನ್ನಾಗಿ ಕಳುಹಿಸಲಾಗಿದೆ ಎಂದು ತಿಳಿದುಕೊಳ್ಳುತ್ತಿದ್ದರು. ಈ ಬಗ್ಗೆ ದೂರುಗಳು ಹಜ್‌ ಸಮಿತಿಗಳಿಗೆ ಆಗಾಗ ಬರುತ್ತಿತ್ತು. ಎಲ್ಲಾ ಹಜ್‌ ಯಾತ್ರಿಕರು ತಮ ವೈಯಕ್ತಿಕ ಕೆಲಸ ಮಾಡುವಂತೆ ಕೇಳುತ್ತಿದ್ದರು. ಮತ್ತು ಹಾಗೆ ಮಾಡದಿದ್ದರೆ ಸರ್ಕಾರಕ್ಕೆ ದೂರು ನೀಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಹೊಸ ಹಜ್‌ ನೀತಿಯಲ್ಲಿ, ಅವರ ಪದನಾಮವನ್ನು ಬದಲಾಯಿಸಲಾಗಿದೆ ಮತ್ತು ಅವರಿಗೆ ಗೌರವವನ್ನು ನೀಡಲಾಗಿದೆ.

RELATED ARTICLES

Latest News