ನವದೆಹಲಿ,ಆ.7– ಒಲಿಂಪಿಕ್ಸ್ ಕ್ರೀಡಾಕೂಟದಿಂದ ವಿನೇಶ್ ಫೋಗಟ್ ಅನರ್ಹಗೊಳಿಸಿರುವುದಕ್ಕೆ ಪ್ರಬಲ ವಿರೋಧವನ್ನು ದಾಖಲಿಸಿ ಪ್ರಕರಣವನ್ನು ಖುದ್ದಾಗಿ ನಿಗಾ ವಹಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ ಪಿ.ಟಿ.ಉಷಾ ಅವರಿಗೆ ಸೂಚನೆ ನೀಡಿದ್ದಾರೆ.
ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ನಿನ್ನೆ ಮೂರು ಪಂದ್ಯಗಳನ್ನು ಗೆದ್ದು ಫೈನಲ್ ಪ್ರವೇಶಿಸಿದ್ದರು. ಇಂದು ಅಮೆರಿಕದ ಹಿಲ್ಡೆಬ್ರಾಂಡ್ಟ್ ಸಾರಾ ಆನ್ ರೊಂದಿಗೆ ಅಂತಿಮ ಪಂದ್ಯಾವಳಿಯಲ್ಲಿ ಸ್ಪರ್ಧಿಸುವ ಮುನ್ನ ದೇಹತೂಕ ಹೆಚ್ಚಾದ ಕಾರಣಕ್ಕೆ ಅನರ್ಹಗೊಂಡಿದ್ದಾರೆ.
ಇದನ್ನು ಬಲವಾಗಿ ವಿರೋಧಿಸುವಂತೆ ಪ್ರಧಾನಮಂತ್ರಿ ಪಿ.ಟಿ.ಉಷಾ ಅವರಿಗೆ ಸೂಚಿಸಿದ್ದಾರೆ.ವಿಶ್ವ ಕುಸ್ತಿ ಸಂಸ್ಥೆ ನಿರ್ಧಾರಕ್ಕೆ ತೀವ್ರವಾದ ಆಕ್ಷೇಪವನ್ನು ದಾಖಲಿಸಬೇಕು. ವಿನೇಶ್ ಫೋಗಟ್‌ರವರಿಗೆ ಅಗತ್ಯವಾದ ಕಾನೂನಿನ ನೆರವು ನೀಡಬೇಕೆಂದು ಸೂಚಿಸಿರುವುದಲ್ಲದೆ, ಭಾರತೀಯ ಕ್ರೀಡಾಪಟುಗಳಿಗೆ ಎಲ್ಲಾ ರೀತಿಯ ಸಹಾಯ ನೀಡಿ ವಿನೇಶ್ ಫೋಗಟ್ ಪ್ರಕರಣದಲ್ಲಿ ಖುದ್ದಾಗಿ ಕಾಳಜಿ ತೆಗೆದುಕೊಳ್ಳಿ ಎಂದು ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಫೋಗಟ್‌ರಿಗೆ ದೇಶಾದ್ಯಂತ ಭಾರಿ ಬೆಂಬಲ ವ್ಯಕ್ತವಾಗಿದೆ. ಒಲಿಂಪಿಕ್‌್ಸನಿಂದ ಅನರ್ಹರಾಗಿದ್ದರೂ ಕೋಟ್ಯಂತರ ಭಾರತೀಯರ ಮನದಲ್ಲಿ ಈಗಾಗಲೇ ಚಿನ್ನ ಗೆದ್ದಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ನಡೆಯುತ್ತಿದೆ.