ಬೆಳಗಾವಿ, ಆ. 7- ಕಾರ್ಖಾನೆ ಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ ನೋಡನೋಡುತ್ತಿದ್ದಂತೆ ಕಾರ್ಖಾನೆ ಒಳಗೆ ಸಂಪೂರ್ಣ ಆವರಿಸಿಕೊಂಡು ಹೊತ್ತಿ ಉರಿದ ಪರಿಣಾಮ ಕಾರ್ಮಿಕನೊಬ್ಬ ಸುಟ್ಟು ಕರಕಲಾಗಿರುವ ದಾರುಣ ಘಟನೆ ನಡೆದಿದೆ.
ತಾಲ್ಲೂಕಿನ ಮಾರ್ಕಂಡೇಯ ನಗರದ ಹಾವಗೆಯಲ್ಲಿ ಸುಮಾರು 5 ಎಕರೆ ಪ್ರದೇಶದಲ್ಲಿರುವ ಸ್ನೇಹಂ ಫ್ಯಾಕ್ಟರಿಯಲ್ಲಿ ರಾತ್ರಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಕಾರ್ಖಾನೆ ಆವರಿಸಿಕೊಂಡಿದೆ.ತಕ್ಷಣ ಸೆಕೆಂಡ್ ಶಿಫ್ಟ್ ನಲ್ಲಿ ಕೆಲಸ ಮಾಡುತ್ತಿದ್ದ 150 ಮಂದಿ ಕಾರ್ಮಿಕರು ಹೊರಗೆ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.
ಆದರೆ ಲಿಫ್ಟ್ ನಲ್ಲಿದ್ದ ಯಲ್ಲಪ್ಪಗುಂಡ್ಯಾಳ ಎಂಬ ನೌಕರ ಒಳಗೆ ಸಿಕ್ಕಿಕೊಂಡಿದ್ದರು.ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ 8 ಅಗ್ನಿಶಾಮಕ ವಾಹನದೊಂದಿಗೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾದರೂ ಸಹ ಬೆಂಕಿ ತಹಬದಿಗೆ ತರಲು ಸಾಧ್ಯವಾಗಿಲ್ಲ.
ಸತತ 14 ಗಂಟೆಗೂ ಹೆಚ್ಚು ಕಾಲ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಾರ್ಖಾನೆ ಕಿಟಕಿ ಒಡೆದು ಅಲ್ಲಿಂದ ನೀರು ಹಾಯಿಸಿ ಬೆಂಕಿ ನಂದಿಸಲು ಯತ್ನಿಸಿದರಾದರೂ ಅದು ಸಾಧ್ಯವಾಗದ ಕಾರಣ ಜೆಸಿಬಿ ಮೂಲಕ ಕಾರ್ಖಾನೆಯ ಗೋಡೆ ಒಡೆದು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದೇ ವೇಳೆ ಕಾರ್ಖಾನೆಯ ಮೊದಲ ಮಹಡಿ ಕುಸಿದಿದೆ. ಪೊಲೀಸರು, ಎನ್‌ಡಿಆರ್‌ಎಫ್ ಅಗ್ನಿ ಶಾಮಕದಳ ಸತತ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು.
ಈ ಕಾರ್ಖಾನೆಯಲ್ಲಿ ಮೂರು ಶಿಫ್ಟ್ ನಲ್ಲಿ ನೌಕರರು ಕೆಲಸ ಮಾಡುತ್ತಾರೆ. ನಿನ್ನೆ ಬೆಳಗಿನ ಶಿಫ್ಟ್ ನಲ್ಲಿ ಕೆಲಸ ಮುಗಿಸಿ ತೆರಳಿದ್ದರು. ಸೆಕೆಂಡ್ ಶಿಫ್ಟ್ ನಲ್ಲಿ ನೌಕರರು ಕೆಲಸ ಮಾಡುತ್ತಿದ್ದಾಗ ಸಂಜೆ 8 ಗಂಟೆ ಸುಮಾರಿನಲ್ಲಿ ಈ ಕಾರ್ಖಾನೆಯೊಳಗೆ ಏಕಾಏಕಿ ಬೆಂಕಿ ಕಾಣಿಸಿದ್ದರಿಂದ ನೌಕರರು ರಕ್ಷಣೆಗಾಗಿ ಚೀರುತ್ತಾ ಹೊರಗೆ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.
ಬೆಂಕಿ ಅವಘಡದಿಂದಾಗಿ ಲಿಫ್ಟ್ ಒಳಗೆ ಸಿಕ್ಕಿಕೊಂಡಿದ್ದ ಯಲ್ಲಪ್ಪ ಸುಟ್ಟು ಕರಕಲಾಗಿದ್ದು, ಇಂದು ಬೆಳಗ್ಗೆ ಲಿಫ್ಟ್ ನಲ್ಲಿ ಕೇವಲ ಆತನ ಮೂಳೆ ಮಾತ್ರ ಕಂಡುಬಂದಿದೆ. ಯಲ್ಲಪ್ಪ ಕುಟುಂಬಸ್ಥರು, ಸಂಬಂಧಿಕರು ಕಾರ್ಖಾನೆ ಬಳಿ ದೌಡಾಯಿಸಿ ರೋದಿಸುವ ದೃಶ್ಯ ಮನಕಲಕುವಂತಿತ್ತು. ಬೆಂಕಿ ಅವಘಡಕ್ಕೆ ಸದ್ಯಕ್ಕೆ ಕಾರಣ ತಿಳಿದುಬಂದಿಲ್ಲ.