ಬೆಂಗಳೂರು, ಆ.9- ಚನ್ನಪಟ್ಟಣ ತಹಸೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿದ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು, ತಪ್ಪು ಮಾಹಿತಿ ನೀಡಿದ ತಹಸೀಲ್ದಾರ್ ಅವರನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.
ಚನ್ನಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ವರ್ಷ ಕಳೆದರೂ ಅನುಷ್ಠಾನಗೊಳ್ಳದ ಇ-ಆಫೀಸ್ ಬಗ್ಗೆ ಸಚಿವರು ಬೇಸರಗೊಂಡು ತಹಸೀಲ್ದಾರ್ ನರಸಿಂಹ ಮೂರ್ತಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಇ-ಆಫೀಸ್ ಬದಲಿಗೆ ಲೆಡ್ಜರ್ ಪುಸ್ತಕದಲ್ಲೇ ಜನರ ಸಮಸ್ಯೆಗಳನ್ನು ದಾಖಲಿಸಲಾಗಿದೆ. ಸಾಮಾನ್ಯ ಜನರ ಸಮಸ್ಯೆಗಳ ಯಾವ ಮನವಿಗೂ ತಹಸೀಲ್ದಾರ್ ಕಚೇರಿಯಲ್ಲಿ ಪರಿಹಾರ ಸಿಗದಿರುವುದು ಬೆಳಕಿಗೆ ಬಂದಿದೆ.
ಆದರೂ ಇ-ಆಫೀಸ್ ಮೂಲಕ ಜನರ ಅರ್ಜಿಯನ್ನು ಕಳುಹಿಸಲಾಗಿದೆ ಎಂದು ತಹಸೀಲ್ದಾರ್ ತಪ್ಪು ಮಾಹಿತಿ ನೀಡಿದ್ದಾರೆ. ಕೂಡಲೇ ಲೆಡ್ಜರ್ ಪರಿಶೀಲಿಸಿದ ಸಚಿವರು, ಇ-ಆಫೀಸ್ ಆರಂಭಿಸದಿರುವ ಬಗ್ಗೆ ಸ್ಥಳದಲ್ಲೇ ತಹಸೀಲ್ದಾರರಿಗೆ ಚಳಿ ಬಿಡಿಸಿದ್ದಾರೆ.