ಮೈಸೂರು, ಆ.9– ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಬೀದಿಗಿಳಿದು ಹೋರಾಟ ನಡೆಸುತ್ತಿರುವ ಸಂದರ್ಭದಲ್ಲೇ ಕಾಂಗ್ರೆಸ್ ವತಿಯಿಂದ ನಗರದ ವಿವಿಧೆಡೆ ದೋಸ್ತಿ ನಾಯಕರನ್ನು ಟೀಕಿಸಿರುವ ಫ್ಲಕ್ಸ್ ಗಳಿಂದಾಗಿ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರಿನಿಂದ ಆರಂಭಗೊಂಡಿರುವ ಬಿಜೆಪಿ-ಜೆಡಿಎಸ್‌ನ ಮೈಸೂರು ಚಲೋ ಪಾದಯಾತ್ರೆ ಅಂತಿಮ ಹಂತ ತಲುಪಿ ಇಂದು ಮೈಸೂರು ಪ್ರವೇಶಿಸುತ್ತಿರುವ ನಡುವೆಯೇ ಈ ಫ್ಲಕ್ಸ್ ಗಳನ್ನು ನೋಡಿ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಗ್ಗೆ ಮಾಜಿ ಸಚಿವ ಸಾ.ರಾ.ಮಹೇಶ್ ನೇತೃತ್ವದಲ್ಲಿ ನೂರಾರು ಮಂದಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ನಗರದ ಮೆಟ್ರೋಪೋಲ್ ವೃತ್ತದ ಬಳಿ ಪ್ರತಿಭಟನೆ ನಡೆಸಿದ್ದಾರೆ.
ದೇವೇಗೌಡರ ಕುಟುಂಬದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಅಭಿವೃದ್ಧಿ ಕಾರ್ಯ ಶೂನ್ಯವಾಗಿದೆ. ಹಲವಾರು ಹಗರಣಗಳು ನಡೆಯುತ್ತಿವೆ. ಹೀಗಿರುವಾಗ ನಮ ನಾಯಕರ ಮೇಲೆ ಆರೋಪಗಳನ್ನು ಮಾಡಿ ಫ್ಲಕ್ಸ್ ಗಳನ್ನು ಹಾಕಿರುವುದು ರಾಜಕೀಯ ದ್ವೇಷ ಎಂದು ಸಾ.ರಾ.ಮಹೇಶ್ ಕಿಡಿಕಾರಿದ್ದಾರೆ.
ಈ ನಡುವೆ ರಸ್ತೆ ತಡೆ ನಡೆಸಲು ಮುಂದಾದಾಗ ಪೊಲೀಸರು ಅವರನ್ನು ತಡೆದಿದ್ದಾರೆ. ಈ ವೇಳೆ ನೂಕುನುಗ್ಗಲು ಉಂಟಾಗಿದ್ದು, ಘೋಷಣೆ ಕೂಗುತ್ತಿದ್ದ ಕಾರ್ಯಕರ್ತರು ಹಾಗೂ ಮುಖಂಡರನ್ನು ಬಸ್‌ನಲ್ಲಿ ತುಂಬಿ ಬೇರೆಡೆ ಕಳುಹಿಸಲಾಗಿದೆ.
ಜನಾಂದೋಲನ ಕಾರ್ಯಕ್ರಮ ಕೂಡ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸೇರಿದಂತೆ ಬಹುತೇಕ ಎಲ್ಲ ಸಚಿವರೂ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ಕಲ್ಪಿಸುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ಜೆಡಿಎಸ್, ಬಿಜೆಪಿ ಪಾದಯಾತ್ರೆ ಆಗಮಿಸುತ್ತಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ.