ಕೊಪ್ಪಳ,ಆ.12- ತುಂಗಭದ್ರಾ ಡ್ಯಾಂನ ವಾರ್ಷಿಕ ನಿರ್ವಹಣಾ ಗುತ್ತಿಗೆದಾರರು ಯಾರು? ಅವರಿಗೆ ಎಷ್ಟು ಕೋಟಿ ಹಣ ಸಂದಾಯ ಆಗಿದೆ? ಎಂದು ಬಹಿರಂಗ ಪಡಿಸಬೇಕು ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ತುಂಗಭದ್ರಾ ಜಲಾಶಯದಲ್ಲಿ ಕಳಚಿಕೊಂಡ 19ನೇ ಕ್ರಸ್ಟ್‌ಗೇಟ್ ವೀಕ್ಷಣೆ ಮಾಡಿದ ಶಾಸಕ ಜನಾರ್ದನ ರೆಡ್ಡಿ , ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ತುಂಗಭದ್ರಾ ಜಲಾಶಯದ ನಿರ್ವಹಣೆ ಯಾರಿಗೆ ಕೊಟ್ಟಿದ್ದಾರೆ? ಇದಕ್ಕೆ ಎಲ್ಲಾ ಸರ್ಕರವೇ ಹೊಣೆ. ಡಿಕೆಶಿ ಅಚಾನಕ್ ಆಗಿದೆ ಎಂದು ಹೇಳುತ್ತಾರೆ, ಇದನ್ನು ಒಪ್ಪುವ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದ್ದಾರೆ.
ತುಂಗಭದ್ರಾ ಡ್ಯಾಂ ವಿಚಾರದಲ್ಲಿ ನಾನು ಯಾರ ಮೇಲೂ ವೈಯಕ್ತಿಕ ಆರೋಪ ಮಾಡಲ್ಲ. ಆದ್ರೆ ಈ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯತನದ ವಿರುದ್ಧ ಸಿಬಿಐ ತನಿಖೆಯಾಗಬೇಕು. ಡ್ಯಾಂನ ವಾರ್ಷಿಕ ನಿರ್ವಹಣಾ ಗುತ್ತಿಗೆದಾರರು ಯಾರು? ಅವರಿಗೆ ಎಷ್ಟು ಕೋಟಿ ಹಣ ಸಂದಾಯ ಆಗಿದೆ? ಅಂತ ಸರ್ಕಾರ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೇ ಗೇಟ್ ಅನ್ನು ನೀವು ಸರಿ ಮಾಡದಿದ್ದರೆ ಯಾರಾದರೂ ಒಬ್ಬರು ಸರಿಪಡಿಸ್ತಾರೆ. ಆದ್ರೆ ಇದು ನಮ ಭಾಗದ ರೈತರಿಗೆ ಆದ ದೊಡ್ಡ ಅನ್ಯಾಯ. ಸರ್ಕಾರ ಇದರ ಸಂಪೂರ್ಣ ಜವಾಬ್ದಾರಿ ಹೊರಬೇಕು, ನಿರ್ಲಕ್ಷತನ ತೋರಿದವರ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಬೇಸಿಗೆ ಕಾಲದಲ್ಲಿ ಡ್ಯಾಂ ಗೇಟ್ ಪರಿಶೀಲಿಸಿ, ನಿರ್ವಹಣೆ ಮಾಡಬೇಕು. ಸರ್ಕಾರ ಯಾವ ಕೆಲಸವನ್ನೂ ಮಾಡಿಲ್ಲ. ಹಳೇ ಡ್ಯಾಂಗಳ ನಿರ್ವಹಣೆಗೆ ಕೇಂದ್ರ ಸರ್ಕಾರ ತಂಡ ರಚನೆ ಮಾಡಿದೆ. ಅದನ್ನು ಇವರು ಸಂಪರ್ಕ ಮಾಡಿದ್ದಾರಾ? ಇದೆಲ್ಲವೂ ಮುಖ್ಯವಾಗುತ್ತೆ. ಇದಕ್ಕಾಗಿ ಸರ್ಕಾರ ಸಾಕಷ್ಟು ಹಣ ಖರ್ಚು ಮಾಡುತ್ತೆ! ಕರ್ನಾಟಕ ಕಾಂಗ್ರೆಸ್ ಸರ್ಕಾರ ಇದ್ಯಾವುದೇ ನಿಯಮಗಳನ್ನು ಅನುಸರಿಸುತ್ತಿಲ್ಲ ಎಂದು ಆಕ್ಷೇಪಿಸಿದ್ದಾರೆ.
ಸರಿಯಾಗಿ ನಿರ್ವಹಣೆ ಮಾಡಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಇದರಲ್ಲಿ ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತೆ. ಇದು ಮೂರು ರಾಜ್ಯಕ್ಕೆ ಸಂಬಂಧಿಸಿದ ವಿಚಾರವಾದರೂ ಡ್ಯಾಂ ನಮ ಸುಪರ್ದಿಯಲ್ಲಿದೆ. ನಾನು ಯಾವುದೇ ರಾಜಕೀಯ ಉದ್ದೇಶದಿಂದ ಮಾತನಾಡುತ್ತಿಲ್ಲ.
ವಿಶ್ವದಲ್ಲಿ ಇರುವ ಎಲ್ಲಾ ರೀತಿಯ ಟೆಕ್ನಾಲಜಿ ಬಳಸಿ ಇದನ್ನು ಕೂಡಲೇ ನಿರ್ವಹಣೆ ಮಾಡಿ ಡ್ಯಾಂ ಉಳಿಸುವ ಕೆಲಸ ಮಾಡಬೇಕು. ಡಿಕೆಶಿ ಹೇಳಿದಂತೆ ಅಚಾನಕ್ ಆಗಿ ಕಟ್ ಆಗಿದೆ ಎಂದರೆ ಸಣ್ಣ ಮಕ್ಕಳು ಕೂಡಾ ನಗುತ್ತಾರೆ. ಈ ವೈಫಲ್ಯದ ಸಂಪೂರ್ಣ ಜವಾಬ್ದಾರಿ ಸರ್ಕಾರವೇ ತೆಗೆದುಕೊಳ್ಳಬೇಕು. ಇದು ತುಂಗಭದ್ರಾ ಡ್ಯಾಂ ಬೋರ್ಡ್ ಹಾಗೂ ಸರ್ಕಾರ ಎರಡರ ವೈಲ್ಯವೂ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.