Friday, November 22, 2024
Homeರಾಜ್ಯಕ್ಯಾಪ್ಟನ್‌ ಅಭಿಮನ್ಯು ನೇತೃತ್ವದಲ್ಲಿ ಅದ್ಧೂರಿ ದಸರಾ

ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದಲ್ಲಿ ಅದ್ಧೂರಿ ದಸರಾ

ಮೈಸೂರು, ಆ. 13- ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ 14 ಆನೆಗಳು ಭಾಗವಹಿಸಲಿವೆ. ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದಲ್ಲಿ ದಸರ ಉತ್ಸವ ನೆರವೇರಲಿದೆ.ಅಭಿಮನ್ಯು, ವರಲಕ್ಷಿ ಧನಂಜಯ, ಗೋಪಿ ,ಭೀಮ, ಲಕ್ಷಿ, ಕಂಜನ್‌, ರೋಹಿತ್‌, ಏಕಲವ್ಯ ಆನೆಗಳು ಮೊದಲ ತಂಡದಲ್ಲಿ ಆಗಮಿಸಲಿವೆ. ಎರಡನೇ ತಂಡದಲ್ಲಿ ಪ್ರಶಾಂತ, ಮಹೇಂದ್ರ, ಸುಗ್ರೀವ, ಲಕ್ಷಿ, ಹಿರಣ್ಯ ಆನೆಗಳು ಮೈಸೂರಿಗೆ ಆಗಮಿಸಲಿವೆ.

ಹೆಚ್ಚುವರಿಯಾಗಿ ಹರ್ಷ, ಅಯ್ಯಪ್ಪ, ಪಾರ್ಥ ಸಾರಥಿ ಹಾಗೂ ಮಾಲಾದೇವಿ ಆನೆಗಳು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿವೆ. ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ನಾಡಹಬ್ಬ ಮೈಸೂರು ದಸರಾವನ್ನು ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ನಡೆದ ನಾಡಹಬ್ಬ ಮೈಸೂರು ದಸರಾ -2024ರ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕಳೆದ ಬಾರಿ ಬರಗಾಲದ ಕಾರಣ ಅದ್ಧೂರಿಯಾಗಿ ಆಚರಿಸಲು ಆಗಿರಲಿಲ್ಲ. ಈ ಬಾರಿ ರಾಜ್ಯಾದ್ಯಂತ ಉತ್ತಮ ಮಳೆಯಾಗಿದೆ. ಬಹುತೇಕ ಎಲ್ಲಾ ಜಲಾಶಯಗಳು ತುಂಬಿವೆ. ಹಾಗಾಗಿ ದಸರಾವನ್ನು ವಿಜೃಂಭಣೆಯಿಂದ ಜನರ ಹಬ್ಬವನ್ನಾಗಿ ಆಚರಿಸಲು ತೀರ್ಮಾನಿಸಲಾಗಿದೆ.

ಕಳೆದ ವರ್ಷ ದಸರಾ ಆಚರಣೆಗೆ 30 ಕೋಟಿ ರೂ. ನೀಡಲಾಗಿತ್ತು. ಈ ಬಾರಿ ವಿಜೃಂಭಣೆಯಿಂದ ಆಚರಿಸಲು ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸುವ ಟ್ಯಾಬ್ಲೋಗಳು ಹೆಚ್ಚು ಆಕರ್ಷಕ, ಅರ್ಥಗರ್ಭಿತವಾಗಿ ಹಾಗೂ ವೈವಿಧ್ಯಮಯವಾಗಿರಬೇಕೆಂದು ಸೂಚಿಸಲಾಗಿದೆ.

ಅ.3ರಂದು ಚಾಮುಂಡಿ ಬೆಟ್ಟದಲ್ಲಿ ಬೆಳಿಗ್ಗೆ 9.15ಕ್ಕೆ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಉದ್ಘಾಟನೆ ದಿನವೇ ವಸ್ತು ಪ್ರದರ್ಶನ ಕೂಡಾ ಆರಂಭಿಸಲು ಸೂಚಿಸಲಾಗಿದೆ. ವಸ್ತು ಪ್ರದರ್ಶನದಲ್ಲಿ ಎಲ್ಲ ಇಲಾಖೆಗಳ ಮಳಿಗೆಗಳಲ್ಲಿ ಸರ್ಕಾರದ ಸಾಧನೆಗಳು, ಗ್ಯಾರಂಟಿ ಯೋಜನೆಗಳನ್ನು ಬಿಂಬಿಸುವ ಕೆಲಸವಾಗಬೇಕು ಎಂದು ಸೂಚಿಸಲಾಗಿದೆ.ಆಗಸ್ಟ್‌‍ 21ರಂದು ಬೆಳಿಗ್ಗೆ 10.10 ಗಂಟೆಯಿಂದ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪೂಜೆ ನಡೆಯಲಿದೆ.

ಅಕ್ಟೋಬರ್‌ 3 ರಿಂದ ದಸರಾ ಮಹೋತ್ಸವ 12ರ ವರೆಗೆ ನಡೆಯಲಿದೆ. ಸಂಪ್ರದಾಯದಂತೆ 9 ದಿನ ಕಾರ್ಯಕ್ರಮಗಳು ಹಾಗೂ 10ನೇ ದಿನ ಜಂಬೂ ಸವಾರಿ ಏರ್ಪಾಡು ಮಾಡಲಾಗತ್ತದೆ. ಅಕ್ಟೋಬರ್‌ 12ರಂದು ಮಧ್ಯಾಹ್ನ 1.41 ರಿಂದ 2.10 ಗಂಟೆ ವರೆಗೆ ಜಂಬೂ ಸವಾರಿ, ನಂದಿ ಧ್ವಜ ಪೂಜೆ ಹಾಗೂ ಸಂಜೆ 4 ಗಂಟೆಯಿಂದ ಪುಷ್ಪಾರ್ಚನೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ, ವಸ್ತು ಪ್ರದರ್ಶನ, ದೀಪಾಲಂಕಾರ, ಆಹಾರ ಮೇಳ ಮತ್ತಿತರ ಕಾರ್ಯಕ್ರಮಗಳನ್ನು ಅತ್ಯಂತ ವ್ಯವಸ್ಥಿತವಾಗಿ, ಅರ್ಥಪೂರ್ಣವಾಗಿ ಆಯೋಜಿಸಬೇಕು. ಸ್ಥಳೀಯ ಕಲಾವಿದರಿಗೆ ಹೆಚ್ಚು ಅವಕಾಶ ದೊರಕಿಸಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಮುಖ್ಯಮಂತ್ರಿಸಿದ್ದರಾಮಯ್ಯ ಸೂಚಿಸಿದ್ದಾರೆ. ದಸರಾ ಉದ್ಘಾಟನೆಗೆ ಯಾರನ್ನು ಆಹ್ವಾನಿಸಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ.

RELATED ARTICLES

Latest News