ಬೆಂಗಳೂರು,ಆ.13- ಭಾರಿ ಮಳೆಗೆ ಬೆಂಗಳೂರು ತತ್ತರಿಸಿ ಹೋಗಲು ಬಿಬಿಎಂಪಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣ ಎನ್ನುವ ಅಂಶ ಇದೀಗ ಬಹಿರಂಗಗೊಂಡಿದೆ.ಮಳೆಯಾದಾಗ ನಗರದ ಯಾವ ಯಾವ ಪ್ರದೇಶಗಳಲ್ಲಿ ನೀರು ನಿಲ್ಲಲಿದೆ ಎನ್ನುವುದನ್ನು ನಗರ ಸಂಚಾರಿ ಪೊಲೀಸರು ಗುರುತಿಸಿ ಬಿಬಿಎಂಪಿಯವರಿಗೆ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದರು.
ಸಂಚಾರಿ ಪೊಲೀಸರು ನೀರು ನಿಲ್ಲುವ 180 ಸ್ಥಳಗಳ ಫೋಟೋ ಹಾಗೂ ಸ್ಪಾಟ್ ಸಮೇತ ವರದಿ ನೀಡಿದ್ದರೂ ಬಿಬಿಎಂಪಿ ಅಧಿಕಾರಿಗಳು ಪೊಲೀಸರು ನೀಡಿದ್ದ ವರದಿಯನ್ನು ಕಸದ ಬುಟ್ಟಿಗೆ ಹಾಕಿದ್ದೇ ಮೊನ್ನೆ ನಡೆದ ಮಳೆ ಅವಾಂತರಗಳಿಗೆ ಕಾರಣ ಎನ್ನಲಾಗಿದೆ.
ಸಂಚಾರಿ ಪೊಲೀಸರು ಸುಮಾರು ಮೂರು ತಿಂಗಳು ಸರ್ವೇ ಮಾಡಿ ಮಳೆ ನೀರು ನಿಲ್ಲೋ ಜಾಗ ಗುರುತು ಮಾಡಿದ್ದರು. ಮೂರು ತಿಂಗಳ ಹಿಂದೆಯೇ ವರದಿ ಬಿಬಿಎಂಪಿ ಕೈ ಸೇರಿದ್ದರೂ ಅಧಿಕಾರಿಗಳೂ ದಿವ್ಯ ನಿರ್ಲಕ್ಷ್ಯ ತೋರಿರುವುದು ಇದೀಗ ಜಗಜಾಹೀರಾಗಿದೆ.
ನಗರದ ಭದ್ರಪ್ಪ ಲೇಔಟ್ ,ನಾಗವಾರ ,ವೀರಣ್ಣನಪಾಳ್ಯ,ಹೆಬ್ಬಾಳ ಫ್ಲೈ ಓವರ್ ಕಳೆಗೆ ಸೇರಿದಂತೆ ಮಳೆ ನೀರು ನಿಲ್ಲೋ 180 ಸ್ಥಳ ಸಂಚಾರಿ ಪೊಲೀಸರು ಗುರುತಿಸಿದ್ದರು.ಪೊಲೀಸರು ನೀಡಿದ್ದ ವರದಿಯನ್ನಾಧರಿಸಿ ಬಿಬಿಎಂಪಿಯವರು ಸಮಸ್ಯೆ ಬಗೆಹರಿಸಲು ಮುಂದಾಗಿದ್ದರೆ ಮೊನ್ನೆ ಬಿದ್ದ ಮಳೆಯಿಂದ ಅನಾಹುತ ಆಗುವುದನ್ನು ತಪ್ಪಿಸಬಹುದಿತ್ತು ಎನ್ನಲಾಗಿದೆ.