ಬೆಂಗಳೂರು, ಆ.14-ಕರ್ನಾಟಕ ರಾಜ್ಯದ ಜುಲೈ ತಿಂಗಳಿನ 7971.73 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹವಾಗಿದೆ. ಕಳೆದ ಜೂನ್ ತಿಂಗಳಿಗೆ ಹೋಲಿಸಿದರೆ 197.9 ಕೋಟಿ ರೂ. ಹೆಚ್ಚು ಸಂಗ್ರಹವಾಗಿದೆ.
ವಾಣಿಜ್ಯ ತೆರಿಗೆಗಳ ಇಲಾಖೆಯ ಮಾಹಿತಿ ಪ್ರಕಾರ ಜುಲೈ ತಿಂಗಳಿನಲ್ಲಿ 5990.38 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ, 1893.31 ಕೋಟಿ ರೂ. ಕರ್ನಾಟಕ ಮಾರಾಟ ತೆರಿಗೆ ಹಾಗೂ 88.04 ಕೋಟಿ ರೂ. ವೃತ್ತಿ ತೆರಿಗೆ ಸಂಗ್ರಹಿಸಲಾಗಿದೆ.
ಜೂನ್ ತಿಂಗಳಿಗೆ ಹೋಲಿಸಿದರೆ, ವೃತ್ತಿ ತೆರಿಗೆ ಸಂಗ್ರಹ ಕಡಿಮೆಯಾಗಿದ್ದು, ಸರಕು ಮತ್ತು ಸೇವಾ ತೆರಿಗೆ ಹಾಗೂ ಕರ್ನಾಟಕ ಮಾರಾಟ ತೆರಿಗೆಗಳ ಸಂಗ್ರಹದಲ್ಲಿ ಹೆಚ್ಚಳ ಕಂಡುಬಂದಿದೆ.ಈ ಮೂರು ತೆರಿಗೆಗಳಿಂದ ಏಪ್ರಿಲ್ ತಿಂಗಳಲ್ಲಿ 9664.63 ಕೋಟಿ ರೂ. ಸಂಗ್ರಹವಾಗಿತ್ತು. ಅನಂತರದ ಮೇ, ಜೂನ್ ಹಾಗೂ ಜುಲೈ ತಿಂಗಳುಗಳಲ್ಲಿ ಆ ಪ್ರಮಾಣದ ವಾಣಿಜ್ಯ ತೆರಿಗೆ ಸಂಗ್ರಹಣೆಯಾಗಿಲ್ಲ.
ಕಳೆದ ವರ್ಷದ ಜುಲೈ ತಿಂಗಳಿಗೆ ಹೋಲಿಸಿದರೂ ಈ ವರ್ಷದ ಜುಲೈ ತಿಂಗಳ ವಾಣಿಜ್ಯ ತೆರಿಗೆ ಸಂಗ್ರಹ 515.44 ಕೋಟಿ ರೂ.ನಷ್ಟು ಹೆಚ್ಚಳವಾಗಿದೆ. 2024-25 ನೇ ಹಣಕಾಸು ವರ್ಷದ ಅಂದರೆ, ಕಳೆದ ನಾಲ್ಕು ತಿಂಗಳಲ್ಲಿ 32834.50 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹವಾಗಿದೆ.
ಇದರಲ್ಲಿ ಸರಕು ಮತ್ತು ಸೇವಾ ತೆರಿಗೆ 25033.82 ಕೋಟಿ ರೂ., ಕರ್ನಾಟಕ ಮಾರಾಟ ತೆರಿಗೆ 7321.76 ಕೋಟಿ ರೂ. ಹಾಗೂ ವೃತ್ತಿ ತೆರಿಗೆ 478.92 ಕೋಟಿ ರೂ. ಸಂಗ್ರಹವಾದಂತಾಗಿದೆ. 2023-24 ನೇ ಆರ್ಥಿಕ ಸಾಲಿನಲ್ಲಿ ರಾಜ್ಯದ ಒಟ್ಟು ವಾಣಿಜ್ಯ ತೆರಿಗೆ ಸಂಗ್ರಹ 94363.27 ಕೋಟಿ ರೂ.ನಷ್ಟಾಗಿತ್ತು.