ಬೆಂಗಳೂರು,ಆ.17– ಸಚಿವ ಸಂಪುಟದ ಸದಸ್ಯರ ನಿಯೋಗವನ್ನು ಭೇಟಿ ಮಾಡಲು ರಾಜ್ಯಪಾಲರು ಅನುಮತಿ ನಿರಾಕರಿಸಿರುವ ಬೆಳವಣಿಗೆ ನಡೆದಿದೆ. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟದ ಸದಸ್ಯರ ನಿಯೋಗ ಭೇಟಿ ಮಾಡಿ ಮುಡಾ ಪ್ರಕರಣದಲ್ಲಿ ಅಭಿಯೋಜನೆಗೆ ನೀಡಿರುವ ಪೂರ್ವಾನುಮತಿಯ ಬಗ್ಗೆ ಸಮಾಲೋಚನೆ ನಡೆಸಲು ಮುಂದಾಗಿತ್ತು.
ಆದರೆ ನಿಯೋಗಕ್ಕೆ ಸಮಯ ನೀಡಲು ರಾಜ್ಯಪಾಲರು ನಿರಾಕರಿಸಿದರು. ಹೀಗಾಗಿ ಡಿ.ಕೆ.ಶಿವಕುಮಾರ್ ಅವರು ಮಧ್ಯಾಹ್ನ ತುರ್ತು ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೂರ್ವಾನುಮತಿಯ ಸೂಚನೆಗಳು ಬಹಿರಂಗಗೊಳ್ಳುತ್ತಿದ್ದಂತೆ ಹೊರ ಜಿಲ್ಲೆಗಳಲ್ಲಿ ಪ್ರವಾಸದಲ್ಲಿದ್ದ ಸಚಿವರನ್ನು ಬೆಂಗಳೂರಿಗೆ ಆಗಮಿಸುವಂತೆ ತುರ್ತು ಸಂದೇಶ ರವಾನೆ ಮಾಡಲಾಗಿದೆ. ಹಬ್ಬದ ಸಲುವಾಗಿ ಊರಿಗೆ ತೆರಳಿದ್ದ ಸಚಿವರು ತುರ್ತು ಕರೆಯ ಮೇರೆಗೆ ಎದ್ದುಬಿದ್ದು ಬೆಂಗಳೂರಿನತ್ತ ಧಾವಿಸಿಬಂದರು.