Wednesday, September 11, 2024
Homeರಾಜ್ಯರಾಜ್ಯಪಾಲರ ವಿರುದ್ಧ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ, ಬಿಗಿ ಪೊಲೀಸ್ ಬಂದೋಬಸ್ತ್

ರಾಜ್ಯಪಾಲರ ವಿರುದ್ಧ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ, ಬಿಗಿ ಪೊಲೀಸ್ ಬಂದೋಬಸ್ತ್

ಬೆಂಗಳೂರು,ಆ.17– ಮುಡಾ ಪ್ರಕರಣದಲ್ಲಿ ತನಿಖೆಗೆ ರಾಜ್ಯಪಾಲರು ಪೂರ್ವಾನುಮತಿ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದಿದ್ದು, ರಾಜ್ಯಪಾಲರ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ. ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಲವು ಭಾಗಗಳಲ್ಲಿ ದಿಢೀರ್ ಪ್ರತಿಭಟನೆಗಳು ನಡೆದಿವೆ. ಬೆಂಗಳೂರಿನ ರಾಜಭವನದ ಎದುರು ಕಾರ್ಯಕರ್ತರು ಆಗಮಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಅವರನ್ನು ನಿಯಂತ್ರಿಸಲು ಹರಸಾಹಸ ನಡೆಸಬೇಕಾಯಿತು.

ಪ್ರತಿಭಟನಾಕಾರರು ರಾಜ್ಯಪಾಲರು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುವ ಜೊತೆಗೆ ಬಿಜೆಪಿ ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಏಕಾಏಕಿ ಪ್ರತಿಭಟನೆ ನಡೆಸಿದ್ದರಿಂದಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿ ಕಾರ್ಯಕರ್ತರು ರಾಜಭವನದ ಬಳಿ ಬರುವುದನ್ನು ತಡೆದರು.

ಮೈಸೂರಿನಲ್ಲಿ ಭಾರೀ ಪ್ರತಿಭಟನೆ:
ಮೈಸೂರಿನ ನ್ಯಾಯಾಲಯದ ಬಳಿ ಅಲ್ಪಸಂಖ್ಯಾತರ ಜಾಗೃತಿ ವೇದಿಕೆ ಅಧ್ಯಕ್ಷ ಶಿವರಾಂ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಪರವಾಗಿ ಕಾಂಗ್ರೆಸ್ ನವರು ಪ್ರತಿಭಟನೆ ನಡೆಸಿದರು. ಮುಡಾ ಹಗರಣ ಕುರಿತು ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ವಿರೋಧಿಸಿ ಭಾರೀ ಪ್ರತಿಭಟನೆ ಹಮಿಕೊಳ್ಳ ಲಾಗಿತ್ತು. ನ್ಯಾಯಾಲಯದ ಮುಂದೆ ಟೈರ್ ಗಳಿಗೆ ಬೆಂಕಿ ಹಚ್ಚಿ, ಮಾನವ ಸರಪಳಿ ನಿರ್ಮಿಸಿ ರಾಜ್ಯಪಾಲರ ವಿರುಧ್ಧ ಘೋಷಣೆಗಳನ್ನು ಕೂಗಲಾಯಿತು.

ರಾಜ್ಯಪಾಲರು ಜೆಡಿಎಸ್,ಬಿಜೆಪಿ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಅವರನ್ನು ಕೂಡಲೇ ಬೇರೆ ರಾಜ್ಯಕ್ಕೆ ವರ್ಗಾಯಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.ನ್ಯಾಯಾಲಯ, ಮುಡಾ ಕಚೇರಿ, ಸಿಎಂ ಸಿದ್ದರಾಮಯ್ಯ ನಿವಾಸ, ಕೆ.ಆರ್.ವೃತ್ತ, ಚಾಮುಂಡಿ ಬೆಟ್ಟ ಸೇರೆದಂತೆ ಜನ ನಿಬಿಡ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ರಾಜ್ಯಪಾಲರ ಪೂರ್ವಾನುಮತಿ ಕುರಿತು ಮಾತನಾಡಿರುವ ವಿಧಾನಪರಿಷತ್ ಸದಸ್ಯ ಡಾ.ತಿಮಯ್ಯ, ಕೇಂದ್ರದ ಬಿಜೆಪಿ ಸರ್ಕಾರದ ಒತ್ತಡಕ್ಕೆ ಮಣಿದು ರಾಜ್ಯಪಾಲರು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರ ಪಾತ್ರ ಎಳ್ಳಷ್ಟೂ ಇಲ್ಲ. ಈ ಪ್ರಕರಣದಿಂದ ನಿರ್ದೋಷಿಗಳಾಗಿ ಹೊರ ಬರುವ ವಿಶ್ವಾಸ ಇದೆ. ಒಂದು ವೇಳೆ ಸಿಎಂ ಬಂಧನವೇನಾದರೂ ಆದರೆ, ರಾಜ್ಯದಲ್ಲಿ ರಕ್ತ ಕ್ರಾಂತಿ ನಡೆದುಹೋಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಪ್ರಕರಣದಲ್ಲಿ ಸಿಎಂ ಸಂಪೂರ್ಣ ನಿರ್ದೋಷಿಗಳು. ನಾವು ಕಾನೂನಾತಕ ಹೋರಾಟ ಮಾಡುತ್ತೇವೆ ಎಂದು ಅವರು ತಿಳಿಸಿದರು.

ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ :
ಬೆಂಗಳೂರು,ಆ.17- ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರಿಂದ ಅನುಮತಿ ದೊರೆತಿರುವ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಸೇರಿದಂತೆ ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ರಾಜಭವನ, ವಿಧಾನಸೌಧ, ವಿಕಾಸಸೌಧ, ಸಿಎಂ ಅವರ ಗೃಹಕಚೇರಿ ಕೃಷ್ಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಿಎಆರ್ ಹಾಗೂ ಕೆಎಸ್ಆರ್ಪಿ ತುಕಡಿಗಳನ್ನು ಸ್ಥಳೀಯ ಪೊಲೀಸರ ಜೊತೆ ನಿಯೋಜಿಸಲಾಗಿದೆ.

ಮೈಸೂರು ನಗರದ ಮುಡಾ ಕಚೇರಿ, ಸಿಎಂ ಅವರ ಮನೆ, ಕಚೇರಿ, ಬಸ್ನಿಲ್ದಾಣ ಹಾಗೂ ಅಲ್ಲಿನ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಮಾಡಲಾಗಿದೆ. ಅದೇ ರೀತಿ ಮಂಡ್ಯ, ರಾಮನಗರ, ಶಿವಮೊಗ್ಗ, ಹಾಸನ, ಬೆಳಗಾವಿ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.ಸ್ಥಳೀಯ ಪೊಲೀಸರ ಜೊತೆಗೆ ಡಿಎಆರ್ ಹಾಗೂ ಕೆಎಸ್ಆರ್ಪಿ ತುಕಡಿಗಳನ್ನು ಬಂದೊಬಸ್ತ್ಗಾಗಿ ನಿಯೋಜನೆ ಮಾಡಲಾಗಿದೆ.

RELATED ARTICLES

Latest News