Wednesday, September 11, 2024
Homeರಾಜಕೀಯ | Politicsರಾಜಭವನವನ್ನು ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ : ಹರಿಪ್ರಸಾದ್

ರಾಜಭವನವನ್ನು ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ : ಹರಿಪ್ರಸಾದ್

ಬೆಂಗಳೂರು,ಆ.17- ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಮೇಲೆ ರಾಜಕೀಯ ದ್ವೇಷದಿಂದ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವ ಮೂಲಕ ರಾಜಭವನವನ್ನು ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಜನರಿಂದ ಆಯ್ಕೆಯಾದ ಸರ್ಕಾರಗಳನ್ನು ಹಾಗೂ ಮುಖ್ಯಮಂತ್ರಿಗಳನ್ನು ಅಸ್ಥಿರಗೊಳಿಸುವ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ದ್ವೇಷ ರಾಜಕಾರಣಕ್ಕೆ ಜನರೇ ಕಳೆದ ಲೋಕಸಭೆಯಲ್ಲೇ ಉತ್ತರ ಕೊಟ್ಟಾಗಿದೆ. ಆದರೂ ಕೂಡ ಬಿಜೆಪಿ ಮತ್ತು ಮೋದಿ ಸರ್ಕಾರ ಬುದ್ಧಿ ಕಲಿಯುವ ಲಕ್ಷಣಗಳಿಲ್ಲ ಎಂದಿದ್ದಾರೆ.

ದಲಿತ-ಹಿಂದುಳಿದವರ ಹಾಗೂ ಬಡವರ ಪರವಾಗಿ ಕಾರ್ಯಕ್ರಮಗಳನ್ನು ನೀಡುವ ವಿಪಕ್ಷದ ಸರ್ಕಾರಗಳನ್ನು ಅಸ್ಥಿರಗೊಳಿಸುವ ಪ್ರಜಾಪ್ರಭುತ್ವ ವಿರೋಧಿ ನಡೆಯ ವಿರುದ್ಧ ಜನರು ತಕ್ಕ ಉತ್ತರ ನೀಡಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲಿನ ದ್ವೇಷದ ಪ್ರಕರಣಕ್ಕೆ ಕಾನೂನು ವ್ಯವಸ್ಥೆಯ ಮೂಲಕವೇ ಉತ್ತರ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಮೊದಲು ಬಿ.ಕೆ.ಹರಿಪ್ರಸಾದ್ ಅವರು ಸಿದ್ದರಾಮಯ್ಯ ವಿರುದ್ಧ ಬಹಿರಂಗ ವಾಗ್ದಾಳಿಗಳನ್ನು ನಡೆಸಿದ್ದರು. ಇತ್ತೀಚೆಗೆ ಇಬ್ಬರ ನಡುವೆ ಸಂಧಾನ ನಡೆದಿದ್ದು, ಹರಿಪ್ರಸಾದ್ ಮುಖ್ಯಮಂತ್ರಿಯವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಈಗ ಅದೇ ಹರಿಪ್ರಸಾದ್ ಅವರು ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಸೃಷ್ಟಿಸಿದೆ.

RELATED ARTICLES

Latest News