ಬೆಂಗಳೂರು,ಆ.18- ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿರುವುದನ್ನು ಕಾನೂನಾತಕವಾಗಿ ಹಾಗೂ ರಾಜಕೀಯವಾಗಿ ಎದುರಿಸುವ ಜೊತೆಗೆ ನಮ ಪಾಡಿಗೆ ನಾವು ಆಡಳಿತ ನಡೆಸಿದ್ದೇವೆ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಕಚೇರಿ ದುರ್ಬಳಕೆ ಯಾಗುತ್ತಿದೆ.
ಹೀಗಾಗಿ ಕಾನೂನು ಹೋರಾಟ ನಡೆಸುವುದರ ಜೊತೆಗೆ ರಾಜಕೀಯವಾಗಿಯೂ ತಕ್ಕ ಉತ್ತರ ನೀಡುತ್ತೇವೆ. ನಾಳೆಯಿಂದ ನಮ ಪಕ್ಷದ ಕಾರ್ಯಕರ್ತರು ಬೀದಿಗಿಳಿಯಲಿದ್ದಾರೆ. ಈ ಬಗ್ಗೆ ಈಗಾಗಲೇ ಅಧ್ಯಕ್ಷರು ಸೂಚನೆ ನೀಡಿದ್ದಾರೆ. ಪ್ರತಿಭಟನೆ ವೇಳೆ ಕಲ್ಲುತೂರಾಟ ಸೇರಿದಂತೆ ಯಾವುದೇ ಹಿಂಸಾತಕ ಕೃತ್ಯಗಳನ್ನು ನಡೆಸದೆ ಶಾಂತಿಯುತ ಹೋರಾಟ ಮುಂದುವರೆಸಲಾಗುವುದು ಎಂದು ತಿಳಿಸಿದರು.
ಬಿಜೆಪಿಯವರು ಪ್ರತಿಭಟನೆ ಮಾಡಲಿ. ಅದು ಅವರ ಹಕ್ಕು. ನಾವು ನಮ ಹಕ್ಕನ್ನು ಪ್ರತಿಪಾದಿಸುತ್ತೇವೆ. ರಾಜ್ಯಪಾಲರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವುದು ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಹುನ್ನಾರ ನಡೆಸಿರುವುದು, ಮುಖ್ಯಮಂತ್ರಿಯವರನ್ನು ಗುರಿಯಾಗಿಸಿ ಸರ್ಕಾರವನ್ನೇ ಪತನಗೊಳಿಸುವ ಸಂಚು ನಡೆದಿರುವುದು ಕಣ್ಣೆದುರಿಗೆ ಇದೆ ಎಂದರು.
ಬಿಜೆಪಿಯೇತರ ಆಡಳಿತ ಇರುವ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ರಾಜ್ಯಪಾಲರ ವರ್ತನೆಗಳು ಆಕ್ಷೇಪಾರ್ಹ. ಈಗ ಕರ್ನಾಟಕದಲ್ಲೂ ಅಂಥದ್ದೇ ಪ್ರಯತ್ನ ನಡೆಯುತ್ತಿದೆ. ಇದರ ಕುರಿತಂತೆ ರಾಷ್ಟ್ರಮಟ್ಟದಲ್ಲಿಹೋರಾಟ ನಡೆಸುವ ಬಗ್ಗೆ ಹೈಕಮಾಂಡ್ ನಾಯಕರು ಇಂಡಿಯ ಮೈತ್ರಿಕೂಟದ ಸದಸ್ಯರ ಜೊತೆ ಚರ್ಚೆ ನಡೆಸಲಿದೆ ಎಂದು ತಿಳಿಸಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಶಾಸಕ ಜನಾದರ್ನ ರೆಡ್ಡಿ ಅವರ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡುವಂತೆ ಮನವಿಗಳು ಬಾಕಿ ಇದ್ದರೂ ರಾಜ್ಯಪಾಲರು ಅವನ್ನು ಬದಿಗಿರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅನುಮತಿ ನೀಡಿರುವುದು ಮೇಲ್ನೋಟಕ್ಕೆ ದುರುದ್ದೇಶಪೂರಿತವಾಗಿದೆ. ನಮಗೆ ಈ ನಾಲ್ವರ ವಿರುದ್ಧ ಅರ್ಜಿಗಳು ಬಾಕಿ ಇರುವುದು ಗೊತ್ತಿತ್ತು. ದ್ವೇಷದ ರಾಜಕೀಯ ಬೇಡ ಎಂದು ಸುಮನಿದ್ದೆವು ಎಂದು ಮುಗುಮಾಗಿ ಹೇಳಿದರು.
ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡಿರುವುದರಿಂದ ಕೊಂಚ ಮಟ್ಟಿನ ಅಧೀರತೆ ಇದೆ. ಇಲ್ಲ ಎಂದು ನಾವು ಸುಳ್ಳು ಹೇಳಿ ಸಮರ್ಥಿಸಿಕೊಳ್ಳಲು ಹೋಗುವುದಿಲ್ಲ. ಆಡಳಿತದ ಮೇಲೂ ಪರಿಣಾಮವಾಗಲಿದೆ. ಆದರೆ ಇದನ್ನೆಲ್ಲ ಸಾವರಿಸಿಕೊಂಡು ಉತ್ತಮ ಆಡಳಿತ ನೀಡುವತ್ತ ಗಮನಿಹರಿಸುತ್ತೇವೆ ಎಂದರು.
ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಯಾವುದೇ ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ. ಕಾನೂನು ಸಮರವನ್ನು ಮುಂದುವರೆಸುವ ಜೊತೆಗೆ ಉತ್ತಮ ಆಡಳಿತ ನಡೆಸುವ ಕುರಿತು ಅಭಿಪ್ರಾಯಗಳು ಕೇಳಿಬಂದಿವೆ.
ಕಾನೂನು ಸಮರಕ್ಕೆ ಹಿರಿಯ ವಕೀಲರಾದ ಅಭಿಷೇಕ್ ಸಿಂಘ್ವಿ, ಕಪಿಲ್ ಸಿಬಾಲ್ ಅವರುಗಳು ಮುಖ್ಯಮಂತ್ರಿಗಳ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ಅಗತ್ಯಬಿದ್ದರೆ ಇನ್ನಷ್ಟು ಹಿರಿಯ ವಕೀಲರ ನೆರವು ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡುವಾಗ ಪ್ರಮಾಣಿತ ಕಾರ್ಯ ನಿರ್ವಹಣಾ ಪ್ರಕ್ರಿಯೆ(ಎಸ್ಒಪಿ)ಗಳನ್ನು ಅನುಸರಿಸಿಲ್ಲ. 17ಎ ಅಡಿ ಅನುಮತಿ ನೀಡುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟ ಮಾರ್ಗಸೂಚಿ ರೂಪಿಸಿದೆ. ಮುಖ್ಯಮಂತ್ರಿಯವರಿಗೆ ಡಿಜಿಪಿ ಅಂತಹ ಅಧಿಕಾರಿ ಪ್ರಾಥಮಿಕ ವರ ನೀಡಬೇಕು. ಉಳಿದ ಶಾಸಕರಿಗೆ, ಸಚಿವರಿಗೆ ಯಾವ ಹಂತದ ಅಧಿಕಾರಿಗಳಿಂದ ವರದಿ ಪಡೆಯಬೇಕೆಂಬ ಬಗ್ಗೆ ಸ್ಪಷ್ಟ ಉಲ್ಲೇಖಗಳಿವೆ. ಅದಾವುದನ್ನೂ ರಾಜ್ಯಪಾಲರು ಪರಿಗಣಿಸಿಲ್ಲ. ಸಚಿವ ಸಂಪುಟ ಸಭೆ ನೀಡಿದ್ದ ಸಲಹೆಯನ್ನು ತಳ್ಳಿ ಹಾಕಿದ್ದಾರೆ ಎಂದು ಪರಮೇಶ್ವರ್ ಕಿಡಿಕಾರಿದರು.
ಅಭಿಯೋಜನೆಗೆ ಅನುಮತಿ ದೊರೆತ ನಂತರ ತನಿಖೆ ಮುಂದುವರೆಸಲು ಲೋಕಾಯುಕ್ತರಿಗೆ ಅವಕಾಶವಿದೆ. ಈಗಾಗಲೇ ಜೂ.18ರಂದು ಲೋಕಾಯುಕ್ತರ ಮುಂದೆ ದೂರು ದಾಖಲಾಗಿದೆ. ಬೇರೆ ಆಯ್ಕೆಗಳು ಇದ್ದಂತಿಲ್ಲ. ನ್ಯಾಯಾಲಯ ಅನುಮತಿಸಿದರೆ ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸಬಹುದು ಎಂದು ಹೇಳಿದರು.