Sunday, September 15, 2024
Homeಬೆಂಗಳೂರುಬೆಂಗಳೂರಿನಲ್ಲಿ ನೆರೆರಾಜ್ಯದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ

ಬೆಂಗಳೂರಿನಲ್ಲಿ ನೆರೆರಾಜ್ಯದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ

ಬೆಂಗಳೂರು,ಆ.18- ನಗರದಲ್ಲಿ ನಿನ್ನೆ ಮಧ್ಯರಾತ್ರಿ ನೆರೆರಾಜ್ಯದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಮೊಬೈಲ್ನಲ್ಲಿರುವ ತುರ್ತು ಸಂದೇಶದಿಂದಾಗಿ ಸಂಕಷ್ಟದಲ್ಲಿದ್ದ ಯುವತಿಗೆ ಸ್ನೇಹಿತರು ನೆರವು ನೀಡಿದ್ದಾರೆ.ಈ ಪೈಶಾಚಿಕ ಕೃತ್ಯ ಬೆಂಗಳೂರಿನಲ್ಲಿ ಮತ್ತೆ ಹೆಣ್ಣುಮಕ್ಕಳ ಸುರಕ್ಷತೆಯ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ನೆರೆ ರಾಜ್ಯದ 21 ವರ್ಷದ ಯುವತಿ ನಗರದ ಖಾಸಗಿ ಕಾಲೇಜಿನಲ್ಲಿ ಬಿಬಿಎಂ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದು, ಹೆಬ್ಬಗೋಡಿಯಲ್ಲಿ ವಾಸವಾಗಿದ್ದಾರೆ. ಕೋರಮಂಗಲದಲ್ಲಿ ಪಾರ್ಟಿಯ ಸಲುವಾಗಿ ಸ್ನೇಹಿತರೊಂದಿಗೆ ಪಬ್ಗೆ ಹೋಗಿದ್ದರು. ಅಲ್ಲಿ ಮೋಜು-ಮಸ್ತಿ ಬಳಿಕ ಮನೆಗೆ ತೆರಳುವಾಗ ಎಲ್ಲಾ ಸ್ನೇಹಿತರಿದ್ದ ಕಾರು ಕೋರಮಂಗಲದಲ್ಲಿ ಆಟೋವೊಂದಕ್ಕೆ ಡಿಕ್ಕಿ ಹೊಡೆದಿದೆ.

ಸ್ಥಳದಲ್ಲಿ ಮಾತಿನ ಚಕಮಕಿಗಳು ನಡೆದಿದ್ದು, ಅಲ್ಲಿಗೆ ಹೊಯ್ಸಳ ಪೊಲೀಸರು ಬಂದಿದ್ದಾರೆ. ಇದರಿಂದ ಗಾಬರಿಯಾದ ಯುವತಿ ನಾನು ಪೊಲೀಸರಿಗೆ ಸಿಕ್ಕಿಬಿದ್ದರೆ ಕುಡಿತದ ವಿಚಾರ ಗೊತ್ತಾಗಬಹುದೆಂಬ ಆತಂಕದಿಂದ ಸಂತ್ರಸ್ತ ವಿದ್ಯಾರ್ಥಿನಿ ಬೇರೆ ಆಟೋ ಹಿಡಿದು ಅಲ್ಲಿಂದ ಸ್ವಲ್ಪ ದೂರ ಮುಂದೆ ಹೋಗಿದ್ದಾರೆ. ನಂತರ ಮನೆಗೆ ತೆರಳಲು ಬೈಕ್ ಟ್ಯಾಕ್ಸಿ ಬುಕ್ ಮಾಡಿಕೊಂಡಿದ್ದಾರೆ.

ಮುಂದಿನ ಬೆಳವಣಿಗೆಯಲ್ಲಿ ಸಂತ್ರಸ್ತೆಯ ಗೆಳತಿಯ ಮೊಬೈಲ್ಗೆ ತುರ್ತು ಸಂದೇಶ ಮತ್ತು ಮೊಬೈಲ್ನ ಲೊಕೇಷನ್ ಬಂದಿದೆ. ಇದರಿಂದ ಅಪಘಾತದ ಸ್ಥಳದಲ್ಲಿದ್ದ ಸ್ನೇಹಿತರು ಗಾಬರಿಗೊಂಡಿದ್ದಾರೆ. ತಕ್ಷಣವೇ ಮತ್ತೊಬ್ಬ ಸ್ನೇಹಿತನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ನೇಹಿತ ಮೊಬೈಲ್ ಲೊಕೇಷನ್ ಆಧರಿಸಿ ಸ್ಥಳಕ್ಕೆ ಹೋದಾಗ ಹೊಸೂರು ಸರ್ವೀಸ್ ರಸ್ತೆಯ ಗಿರಿಯಾಸ್ ಶೋರೂಮ್ ಹಿಂಭಾಗದಲ್ಲಿ ಲಾರಿ ನಿಲ್ಲಿಸುವ ಜಾಗದಲ್ಲಿ ಸಂತ್ರಸ್ತ ವಿದ್ಯಾರ್ಥಿನಿ ಬೆತ್ತಲೆಯಾಗಿ ಬಿದ್ದಿರುವುದು ಕಂಡುಬಂದಿದೆ.

ಆಕೆಯ ಮೇಲೆ ಒಂದು ರೆಡ್ ಜಾಕೆಟ್ ಇದ್ದು, ಸ್ನೇಹಿತ ತನ್ನ ಬಟ್ಟೆಯನ್ನು ನೀಡಿ ನೆರವಾಗಿದ್ದಾರೆ. ಅಷ್ಟರಲ್ಲಿ ಇನ್ನಿಬ್ಬರು ಸ್ನೇಹಿತರು ಸ್ಥಳಕ್ಕೆ ಆಗಮಿಸಿದ್ದಾರೆ. ಸೀಟ್ ಕವರ್ನಿಂದ ಆಕೆಯ ದೇಹವನ್ನು ಮುಚ್ಚಿ ಕಾರಿನಲ್ಲಿ ಮಲಗಿಸಿದ್ದಾರೆ. ಸ್ಥಳದಲ್ಲಿ ಹುಡುಕಾಡಿದಾಗ ಅಪರಿಚಿತ ವ್ಯಕ್ತಿಯೊಬ್ಬ ಅಂಗಿ ತೆಗೆದು ಅರೆಬೆತ್ತಲೆಯಾಗಿ, ಪ್ಯಾಂಟ್ನಲ್ಲಿ ನಿಂತಿದ್ದು ಕಂಡುಬಂದಿದೆ. ಆತನೂ ಗಾಬರಿಯಾಗಿದ್ದು, ಮುಖದ ಮೇಲೆ ಪರಚಿದ ಗಾಯಗಳಿದ್ದವು.

ಸಂತ್ರಸ್ತೆಯ ಸ್ನೇಹಿತರು ಅಪರಿಚಿತನನ್ನು ಹಿಡಿಯಲು ಹೋದಾಗ ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ ಸ್ನೇಹಿತರು ಸಂತ್ರಸ್ತೆಯನ್ನು ಬೊಮಸಂದ್ರದ ಖಾಸಗಿ ಆಸ್ಪತ್ರೆಗೆ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ಸಂತ್ರಸ್ತೆಯ ಹೇಳಿಕೆ ಪ್ರಕಾರ ಆರೋಪಿ ಅತ್ಯಾಚಾರ ಮಾಡಲು ಯತ್ನಿಸಿದ್ದ ಎಂದು ತಿಳಿದುಬಂದಿದೆ. ಆಕೆಯ ತಂದೆತಾಯಿಗೆ ವಿಷಯ ತಿಳಿಸಲಾಗಿದೆ.

ಸಂತ್ರಸ್ತೆಯ ಜೊತೆ ಡಿಸಿಪಿ ಅವರು ಮಾತನಾಡಿ ಮಾಹಿತಿ ಕಲೆಹಾಕಿದ್ದಾರೆ. ಹೆಚ್ಚುವರಿ ಪೊಲೀಸ್ ಆಯುಕ್ತರು ಸ್ಥಳ ಪರಿಶೀಲನೆ ನಡೆಸಿದ್ದು, 40 ಮಂದಿ ಪೊಲೀಸರು ಹಾಗೂ ಅಧಿಕಾರಿಗಳನ್ನೊಳಗೊಂಡ 5 ತಂಡಗಳನ್ನು ರಚಿಸಿ ಆರೋಪಿಯ ಪತ್ತೆಗೆ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.

ಸಂತ್ರಸ್ತೆಯು ಬುಕ್ ಮಾಡಿದ ಬೈಕ್ ಟ್ಯಾಕ್ಸಿ ಹಾಗೂ ಅದನ್ನು ಸೇವೆ ಒದಗಿಸಲು ಬಂದಿದ್ದ ವ್ಯಕ್ತಿಯ ಹಿನ್ನಲೆ, ಘಟನೆಯ ದಾರಿಯುದ್ದಕ್ಕೂ ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದೆ. ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯಸಂಹಿತೆಯಡಿ ಅತ್ಯಾಚಾರ ಪ್ರಕರಣವನ್ನು ದಾಖಲಿಸಲಾಗಿದೆ.

ತಡರಾತ್ರಿ ಬೈಕ್ ಸೇವೆಯನ್ನು ಪಡೆಯುವ ಹೆಣ್ಣುಮಕ್ಕಳು ಈ ಘಟನೆಯಿಂದ ಎಚ್ಚೆತ್ತುಕೊಳ್ಳುವ ಅಗತ್ಯವಿದ್ದು, ಈ ಮೊದಲು ಕೂಡ ಇಂತಹ ಅನೇಕ ಪ್ರಕರಣಗಳು ವರದಿಯಾದ ಉದಾಹರಣೆಗಳಿವೆ.

ಅತ್ಯಾಚಾರ ನಡೆದಿಲ್ಲ : ಗೃಹ ಸಚಿವರ ಸ್ಪಷ್ಟನೆ
ಬೆಂಗಳೂರು,ಆ.18- ನಗರದಲ್ಲಿ ಯುವತಿ ಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ನಿಜ. ಆದರೆ ಅತ್ಯಾಚಾರದ ಮೇಲೆ ಖಚಿತ ಮಾಹಿತಿ ಇಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವತಿ ಮೇಲೆ ಅತ್ಯಾಚಾರ ಆಗಿರುವ ಬಗ್ಗೆ ನಿರ್ಧಿಷ್ಟ ಮಾಹಿತಿ ಇಲ್ಲ. ವೈದ್ಯಕೀಯ ಪರೀಕ್ಷೆ ನಡೆಯುತ್ತಿದೆ. ಹೆಣ್ಣುಮಗಳನ್ನು ಕರೆದುಕೊಂಡು ಹೋಗಿ ವಿಚಾರಣೆ ಹಾಗೂ ಇತರೆ ಪರೀಕ್ಷೆಗಳನ್ನು ಮುಂದುವರೆಸಲಾಗಿದೆ. ಸದ್ಯದ ಮಟ್ಟಿಗೆ ಅತ್ಯಾಚಾರ ಪ್ರಕರಣವೆಂದು ಹೇಳಲಾಗುವುದಿಲ್ಲ ಎಂದರು.

RELATED ARTICLES

Latest News