ಬೆಂಗಳೂರು, ಆ.23- ವಿಧಾನಮಂಡಲದಲ್ಲಿ ಅಂಗೀಕಾರಗೊಂಡ 11 ಮಸೂದೆಗಳನ್ನು ರಾಜ್ಯಪಾಲ ಥಾವರ್‌ಚಂದ್ ಗೆಲ್ಹೋಟ್‌ರು ಸಾರಾಸಗಟಾಗಿ ವಾಪಾಸ್ ಕಳುಹಿಸಿರುವುದು, ರಾಜ್ಯ ಸರ್ಕಾರದೊಂದಿಗೆ ವಿಶ್ವಾಸವಿಲ್ಲ ಎಂಬುದರ ಸಂದೇಶವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರಿಗೆ ಮತ್ತು ಸರ್ಕಾರಕ್ಕೆ ಹೊಂದಾಣಿಕೆಯಾಗದೆ ಇದ್ದಾಗ ಸಂಘರ್ಷಗಳು ಸಾಮಾನ್ಯ. ಈವರೆಗೂ ಒಂದೋ ಎರಡೋ ಮಸೂದೆಗಳನ್ನು ಮತ್ತಷ್ಟು ವಿವರಣೆ ನೀಡುವಂತೆ ವಾಪಸ್ ಕಳುಹಿಸಲಾಗುತ್ತಿತ್ತು. ಸಾರಾಸಗಟಾಗಿ ಇದೇ ಮೊದಲ ಬಾರಿಗೆ 11 ಮಸೂದೆಗಳನ್ನು ಪೂರ್ಣವಾಗಿ ವಾಪಸ್ ಕಳುಹಿಸಲಾಗಿದೆ. ಇದರಿಂದ ರಾಜ್ಯಪಾಲರಿಗೆ ಸರ್ಕಾರದ ಮೇಲೆ ವಿಶ್ವಾಸ ಕಡಿಮೆಯಾಗಿದೆ ಎಂಬ ಸಂದೇಶ ರವಾನೆಯಾಗಿದೆ. ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸುವ ಕಾರಣಕ್ಕೆ ಬಿಲ್‌ಗಳನ್ನು ವಾಪಸ್ ಕಳುಹಿಸುತ್ತಿರುವುದಾಗಿ ರಾಜ್ಯಪಾಲರು ಟಿಪ್ಪಣಿ ಬರೆದಿರುವುದು ತಮ ಗಮನಕ್ಕೆ ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಮ ಪಕ್ಷದ ವರಿಷ್ಠರ ಆಹ್ವಾನದ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಗೆ ಹೋಗಿದ್ದಾರೆ. ಅವರ ಜೊತೆ ನಾವು ಸ್ವಯಂ ಪ್ರೇರಿತವಾಗಿ ಹೋಗುತ್ತಿದ್ದೇವೆ. ನಮನ್ನು ಹೈಕಮಾಂಡ್ ಆಹ್ವಾನಿಸಿಲ್ಲ, ವೈಯಕ್ತಿಕವಾಗಿ ನನಗೆ ಇಲಾಖೆಯ ಕೆಲಸಗಳಿವೆ. ಅದಕ್ಕಾಗಿ ಹೋಗುತ್ತಿದ್ದೇನೆ ಎಂದು ಹೇಳಿದರು.
ಮುಡಾ ಪ್ರಕರಣದಲ್ಲಿ ಹೈಕಮಾಂಡ್‌ನ ನಾಯಕರು ಬೆಂಗಳೂರಿಗೆ ಬಂದಾಗ ಸಾಕ್ಷಷ್ಟು ವಿವರಣೆ ನೀಡಲಾಗಿದೆ. ದೆಹಲಿಯ ಸಭೆಯಲ್ಲಿ ಯಾವ ವಿಚಾರ ಚರ್ಚೆಯಾಗಿಲಿದೆ ಎಂಬ ಮಾಹಿತಿ ಇಲ್ಲ. ತಮಿಳುನಾಡು, ಕೇರಳ ಹಾಗೂ ಪಶ್ಚಿಮಬಂಗಾಳದಲ್ಲಿ ರಾಜ್ಯಪಾಲರ ನಡವಳಿಕೆಗಳು ಸಂಸಯಾಸ್ಪದವಾಗಿದೆ. ಇದೇ ವಿಚಾರವಾಗಿ ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟ ರಾಷ್ಟ್ರಮಟ್ಟದಲ್ಲಿ ಪ್ರತಿಭಟನೆ ನಡೆಸುವ ಕುರಿತು ಚರ್ಚೆಯಾಗಬಹುದು ಎಂದರು.
ಜಿಂದಾಲ್‌ನ ಜೆಡ್ಲ್ಯೂಎಸ್ ಸಂಸ್ಥೆಗೆ ಸಾವಿರಾರು ಎಕರೆ ಜಮೀನನ್ನು ಮಂಜೂರು ಮಾಡಲು ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿರುವುದನ್ನು ಸಮರ್ಥಿಸಿಕೊಂಡ ಪರಮೇಶ್ವರ್, ಹಿಂದೆ ನಾವು ವಿರೋಧ ಪಕ್ಷದಲ್ಲಿದ್ದಾಗ ಈ ರೀತಿ ಭೂಮಿ ನೀಡಲು ವಿರೋಧ ಮಾಡಿದ್ದೇವು. ಆಗ ಕೆಲ ಪ್ರಶ್ನೆಗಳಿದ್ದವು. ಈಗ ಅದಕ್ಕೆಲ್ಲಾ ಉತ್ತರ ಸಿಕ್ಕಿದೆ. ಜೊತೆಗೆ ನ್ಯಾಯಾಲಯವೂ ಆದೇಶ ಮಾಡಿದೆ.
ಕೋರ್ಟ್ ನಿರ್ದೇಶನದ ಮೇಲೆ ಮರು ಪರಿಶೀಲನೆ ಮಾಡಲಾಗಿದೆ. ಸ್ಥಳೀಯವಾಗಿ ಇರುವಂತೆ ಎಕರೆಗೆ ಒಂದು ಲಕ್ಷ, ಐವತ್ತು ಸಾವಿರ ದರ ನಿಗದಿ ಮಾಡಲಾಗಿದೆ. ಇದಾದ ಬಳಿಕ ಭೂಮಿ ಮಂಜೂರು ಮಾಡಿದ್ದೇವೆ ಎಂದರು.
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಿದಾಗ ಉದ್ಯಮಿಗಳನ್ನು ಆಹ್ವಾನಿಸಿ, ರಾಜ್ಯದಲ್ಲಿ ರಿಯಾಯಿತಿ ದರದಲ್ಲಿ ಭೂಮಿ, ನೀರು, ವಿದ್ಯುತ್ ನೀಡುತ್ತೇವೆ ಎಂದು ಭರವಸೆ ನೀಡುತ್ತೇವೆ. ಜಿಂದಾಲ್ ಸಂಸ್ಥೆ ರಾಜ್ಯದಲ್ಲಿ ಲಕ್ಷಾಂತರ ಕೋಟಿ ಬಂಡವಾಳ ಹೂಡಿಕೆ ಮಾಡಿದೆ. ಅಂತಹವರಿಗೆ ಒಂದಿಷ್ಟು ರಿಯಾಯಿತಿ ನೀಡಿ ಬೆಂಬಲಿಸಬೇಕಿದೆ. ಜಿಂದಾಲ್‌ನಿಂದ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಿಕ್ಕಿದೆ ಎಂದರು.
ರಾಜ್ಯದಲ್ಲಿ ಈ ಹಿಂದೆ ಸಣ್ಣ ಘಟನೆ ನಡೆದಾಗ ಕೈಗಾರಿಕೆಗಳು ಕರ್ನಾಟಕ ಬಿಟ್ಟು ಹೋಗುತ್ತೇವೆ ಎಂದು ಬೆದರಿಕೆ ಹಾಕಿದ್ದವು. ಸ್ಪರ್ಧಾತಕ ಯುಗದಲ್ಲಿ ಕೆಲ ನಿರ್ಣಯ ಕೈಗೊಳ್ಳಬೇಕಿದೆ. ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ಉಚಿತವಾಗಿ ಭೂಮಿ ನೀಡಲಾಗುತ್ತಿದೆ. ಹಿಂದೆ ಬಿಜೆಪಿ ಆಡಳಿತ ಅವಧಿಯಲ್ಲಿ ಜಿಂದಾಲ್ ಸಂಸ್ಥೆಗೆ ಕೈಗಾರಿಕೆಗೆ ಅಭಿವೃದ್ಧಿಗೆ ಭೂಮಿ ನೀಡುತ್ತೇವೆ ಎಂದು ಹೇಳಿರಲಿಲ್ಲ.
ಕೈಗಾರಿಕೆಗೆ ಉತ್ತೇಜನಕ್ಕಾಗಿ ಭೂಮಿ ನೀಡುತ್ತಿದ್ದೇವೆ ಎಂದು ಮನವರಿಕೆ ಮಾಡಿಕೊಟ್ಟಿದ್ದರೆ ನಾವು ಸುಮನಾಗುತ್ತಿದ್ದೇವು. ಬಹುಶಃ ಬಿಜೆಪಿ ಕೈಗಾರಿಕೆ ಅಭಿವೃದ್ಧಿಗಾಗಿ ಭೂಮಿ ನೀಡುವ ಉದ್ದೇಶ ಇರಲಿಲ್ಲ ಎಂದರು.
ಬಿಜೆಪಿ ಸರ್ಕಾರದ ಹಗರಣಗಳನ್ನು ಒಂದೊಂದೇ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ. ನಿನ್ನೆ ಒಂದು ಪ್ರಕರಣದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ. ಬೋವಿ ಅಭಿವೃದ್ಧಿ ನಿಗಮ, ದೇವರಾಜ್ ಅರಸ್ ಟ್ರಕ್ ಟರ್ಮಿನಲ್, ವಾಲೀಕಿ ಅಭಿವೃದ್ಧಿ ನಿಗಮ, ಜಂತಕಲ್ ಗಣಿ ಹಗರಣ ಸೇರಿ ಎಲ್ಲವನ್ನೂ ತಾರ್ಕಿಕ ಅಂತ್ಯ ಕಾಣಿಸಲಾಗುವುದು ಎಂದು ತಿಳಿಸಿದರು.
ಗೆಜೆಟೆಡೆ ಪ್ರೊಬೆಷನರಿ ಹುದ್ದೆಗಳ ನೇಮಕಾತಿಯಾಗಿ ಒಂದು ವಾರದ ಒಳಗೆ ಪರೀಕ್ಷೆ ನಡೆಸಬೇಕು ಎಂದು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಈ ಮೊದಲು ಎರಡು ಬಾರಿ ಕೆೆಎಎಸ್ ಪರೀಕ್ಷೆ ಮುಂದೂಡಲಾಗಿದೆ. ಮತ್ತೆ ಮುಂದೂಡುವ ಪ್ರಶ್ನೆಯಿಲ್ಲ. ಕೇಂದ್ರ ಲೋಕಸೇವಾ ಆಯೋಗವೂ ಪರೀಕ್ಷೆ ಮುಂದೂಡಬೇಕು ಎಂಬ ಚರ್ಚೆಯಿದೆ. ಅದಕ್ಕಾಗಿ ಕೆಪಿಸಿಸಿ ನಿಗದಿತ ಅವಧಿಯಲ್ಲೇ ಪರೀಕ್ಷೆ ನಡೆಸಲಿದೆ ಎಂದು ಸ್ಪಷ್ಟಪಡಿಸಿದರು.
ಮುಡಾ ಪ್ರಕರಣದಲ್ಲಿ ದಾಖಲೆಗಳನ್ನು ತಿದ್ದಿದ್ದರೆ ಲೋಕಾಯುಕ್ತ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ. ಸಹಿ ತಿದ್ದಿರುವ ಬಗ್ಗೆ ಎಫ್‌ಎಸ್‌ಎಲ್‌ನಿಂದ ಪರಿಶೀಲನೆಗೆ ಒಳಪಡಿಸಲಾಗುವುದು. ಆ ಕಡತದಲ್ಲಿ ಯಾರೆಲ್ಲಾ ಸಹಿ ಮಾಡಿದ್ದಾರೆ, ಬೇರೆ ಅಧಿಕಾರಿಗಳ ಶಿಫಾರಸುಗಳೇನು? ಕಡತ ಮುಖ್ಯಮಂತ್ರಿಗಳ ಹಂತಕ್ಕೆ ಬರುವ ವೇಳೆಗೆ ನಾಲ್ಕೈದು ಅಧಿಕಾರಿಗಳು ಶಿಫಾರಸ್ಸು ಮಾಡಬೇಕಿದೆ. ಅವರ ಶಿಫಾರಸುಗಳೇನು ? ಅಧಿಕಾರಿಗಳ ಸಲಹೆ ಮೀರಿ ಆದೇಶ ನೀಡಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಯಲಿದೆ.
ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ ಪತ್ನಿ ಬರೆದಿರುವ ಪತ್ರಗಳ ಎರಡು ಪುಟಗಳನ್ನು ಮಾತ್ರ ಲಗತ್ತಿಸಿದ್ದಾರೆ. ಉಳಿದ ಪುಟಗಳನ್ನು ಮರೆ ಮಾಚಿದ್ದಾರೆ ಎಂಬ ಆರೋಪ ಸೇರಿದಂತೆ ಯಾರಿಗೆ ಏನೆಲ್ಲಾ ಅನುಮಾನಗಳಿವೆಯೋ ಅವುಗಳನ್ನು ವಿಚಾರಣಾ ಆಯೋಗದ ಮುಂದೆ ಸಲ್ಲಿಸಲಿ ಎಂದು ಸಲಹೆ ನೀಡಿದರು.