Friday, November 22, 2024
Homeರಾಜ್ಯದಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕುರಿತ ಜಂಟಿ ಪರಿಶೀಲನಾ ಸಮಿತಿ ರಚನೆ

ದಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕುರಿತ ಜಂಟಿ ಪರಿಶೀಲನಾ ಸಮಿತಿ ರಚನೆ

ಬೆಂಗಳೂರು,ಆ.25- ದಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕುರಿತ ಜಂಟಿ ಪರಿಶೀಲನಾ ಸಮಿತಿ ರಚಿಸಲಾಗಿದೆ, ಸಮಿತಿಗೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ರವರು 13 ಸದಸ್ಯರನ್ನು ನೇಮಕ ಮಾಡಿದ್ದು, ಇಬ್ಬರು ಸಚಿವರನ್ನು ಸಮಿತಿಯ ಸದಸ್ಯರಾಗಿ ನಾಮನಿರ್ದೇಶನ ಮಾಡಿದ್ದಾರೆ.

ವಿಧಾನಸಭಾಧ್ಯಕ್ಷರು ವಿಧಾನಪರಿಷತ್ನ ಸಭಾಪತಿ ಬಸವರಾಜ ಹೊರಟ್ಟಿ ಅವರ ಸಹಮತಿಯೊಂದಿಗೆ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 250 ರ ಮೇರೆಗೆ ವಿಧಾನಸಭೆಯ 10 ಮತ್ತು ವಿಧಾನಪರಿಷತ್ನ ಮೂವರು ಸದಸ್ಯರನ್ನೊಳಗೊಂಡ ಜಂಟಿ ಪರಿಶೀಲನಾ ಸಮಿತಿಯನ್ನು ರಚನೆ ಮಾಡಿದ್ದಾರೆ.

ಜೊತೆಗೆ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 255 (2 ರ ಮೇರೆಗೆ) ವಿಧೇಯಕಕ್ಕೆ ಸಂಬಂಧಪಟ್ಟ ಇಲಾಖೆಯ ಸಚಿವರಾದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲರನ್ನು ಸಮಿತಿಯ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿದೆ.

2024 ನೇ ಸಾಲಿನ ದಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಸಮಗ್ರವಾಗಿ ಪರಿಶೀಲಿಸಿ ವರದಿ ನೀಡಲು ಸಮಿತಿಗೆ ಮೂರು ತಿಂಗಳ ಕಾಲಾವಕಾಶ ನಿಗಧಿಪಡಿಸಲಾಗಿದೆ.ಆದರೆ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 260ರ ಪ್ರಕಾರ, ಜಂಟಿ ಪರಿಶೀಲನಾ ಸಮಿತಿಯು ತನ್ನ ಅಧ್ಯಕ್ಷನನ್ನು ತಾನೇ ಚುನಾಯಿಸಿಕೊಳ್ಳಬೇಕಿದೆ.

ಸಮಿತಿಯಲ್ಲಿ ವಿಧಾನಸಭಾ ಸದಸ್ಯರಾದ ರಿಜ್ವಾನ್ ಅರ್ಷದ್, ಎನ್.ಎ.ಹ್ಯಾರಿಸ್, ಬಿ.ಶಿವಣ್ಣ, ಎಸ್.ಟಿ.ಸೋಮಶೇಖರ್, ಪ್ರಿಯಕೃಷ್ಣ, ಎ.ಸಿ.ಶ್ರೀನಿವಾಸ್, ಎಸ್.ಸುರೇಶ್ಕುಮಾರ್, ಎಸ್.ಆರ್.ವಿಶ್ವನಾಥ್, ಎಸ್.ರಘು, ಜಿ.ಟಿ.ದೇವೇಗೌಡರು, ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣ, ಯು.ಬಿ.ವೆಂಕಟೇಶ್, ಎಚ್.ಎಸ್.ಗೋಪಿನಾಥ್ ಅವರನ್ನು ಸಭಾಧ್ಯಕ್ಷರನ್ನು ಸದಸ್ಯರನ್ನಾಗಿ ನೇಮಕ ಮಾಡಿದ್ದಾರೆ.

16ನೇ ವಿಧಾನಸಭೆಯ ನಾಲ್ಕನೇ ಅಧಿವೇಶನದಲ್ಲಿ ಜು.25 ರಂದು 2024ನೇ ಸಾಲಿನ ದಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಪರ್ಯಾಲೋಚನೆ ಮತ್ತು ಅಂಗೀಕಾರಕ್ಕಾಗಿ ಮಂಡಿಸಲ್ಪಟ್ಟ ಸಂದರ್ಭದಲ್ಲಿ ಹಲವು ಶಾಸಕರ ಕೋರಿಕೆ ಮೇರೆಗೆ ಈ ವಿಧೇಯಕವನ್ನು ಸಮಗ್ರವಾಗಿ ಪರಿಶೀಲಿಸಿ ವರದಿಯನ್ನು ನೀಡಲು ಜಂಟಿ ಪರಿಶೀಲನಾ ಸಮಿತಿಗೆ ವಹಿಸಲಾಗಿತ್ತು. ಸದನದ ನಿರ್ಣಯದಂತೆ ಸಭಾಧ್ಯಕ್ಷರು ಜಂಟಿ ಪರಿಶೀಲನಾ ಸಮಿತಿಯನ್ನು ರಚಿಸಿದ್ದಾರೆ..

RELATED ARTICLES

Latest News