ಕೋಲ್ಕತಾ,ಆ.26- ಪಶ್ಚಿಮ ಬಂಗಾಳದ ಕೋಲ್ಕತ್ತಾ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಂಜಯ್ ರಾಯ್ನನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ವೇಳೆ ಕೆಲವೊಂದು ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಸಂಜಯ್ ರಾಯ್ ಬಂಧಿತನಾಗಿರುವ ಪ್ರೆಸಿಡೆನ್ಸಿ ಜೈಲಿನಲ್ಲಿ ಈ ಪರೀಕ್ಷೆ ನಡೆಸಲಾಗಿದೆ.ತಾನು ಸೆಮಿನಾರ್ ಹಾಲ್ ತಲುಪಿದಾಗಲೇ ಸಂತ್ರಸ್ತೆ ಮೃತಪಟ್ಟಿದ್ದಳು ಎಂದು ಸಂಜಯ್ ರಾಯ್ ಹೇಳಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಿರಪರಾಧಿ ಎಂದು ಹೇಳಿಕೊಂಡ ಕೆಲವು ದಿನಗಳ ನಂತರ ಸಂಜಯ್ ರಾಯ್ನನ್ನು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇಲ್ಲೂ ಇದೇ ಮಾತನ್ನು ಪುನರುಚ್ಛರಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆದಾಗ್ಯೂ ಸುಳ್ಳು ಪತ್ತೆ ಪರೀಕ್ಷೆಯ ಸಮಯದಲ್ಲಿ ಸಂಜಯ್ ರಾಯ್ ತೀವ್ರ ಆತಂಕಕ್ಕೆ ಒಳಗಾಗಿದ್ದ ಎಂದು ವರದಿ ತಿಳಿಸಿದೆ. ಸಿಬಿಐ ಅಧಿಕಾರಿಗಳು ಹಲವು ಪುರಾವೆಗಳನ್ನು ಮುಂದಿಟ್ಟಾಗ ಅದಕ್ಕೆ ಅನೇಕ ಕಾರಣಗಳನ್ನು ನೀಡಿದ್ದಾನೆ. ಸಂತ್ರಸ್ತೆಯ ಬಳಿಗೆ ಬಂದಾಗ ಆಕೆ ಅದಾಗಲೇ ಮೃತಪಟ್ಟಿದ್ದಳಂತೆ. ಇದರಿಂದ ಭಯಗೊಂಡು ಸ್ಥಳದಿಂದ ಓಡಿ ಹೋಗಿದ್ದಾಗಿ ಸಂಜಯ್ ರಾಯ್ ತಿಳಿಸಿದ್ದಾನೆ ಎಂದು ಮೂಲಗಳು ಹೇಳಿವೆ.
ಸಂಜಯ್ ರಾಯ್ ಆರಂಭದಲ್ಲಿ ಅತ್ಯಾಚಾರ ಮತ್ತು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಆದಾಗ್ಯೂ ಇತ್ತೀಚೆಗೆ ಯು ಟರ್ನ್ ತೆಗೆದುಕೊಂಡು, ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲಾಗಿದೆ ಮತ್ತು ತಾನು ನಿರಪರಾಧಿ ಎಂದು ಹೇಳಿದ್ದಾನೆಂದು ಕೋಲ್ಕತಾ ಪೊಲೀಸರು ಮಾಹಿತಿ ನೀಡಿದ್ದಾರೆ.
ಜೈಲಾಧಿಕಾರಿಗಳ ಬಳಿ ಹೇಳಿದ್ದೇನು? :
ಸಂಜಯ್ ರಾಯ್ ಜೈಲಾಧಿಕಾರಿಗಳ ಬಳಿ ಈ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ತನಗೇನೂ ಗೊತ್ತಿಲ್ಲ ಎಂದು ಹೇಳಿದ್ದಾನೆ. ಅಲ್ಲದೆ ಸೀಲ್ಡಾದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ತನ್ನ ನಿರಪರಾಧಿತ್ವವನ್ನು ಸಾಬೀತುಪಡಿಸಲು ಪಾಲಿಗ್ರ್‌ಾ ಪರೀಕ್ಷೆ ಎದುರಿಸಲು ಸಮತಿಸಿದ್ದ.
ಆದರೆ ಸಿಬಿಐ ಮತ್ತು ಪೊಲೀಸರು ಆತನ ಹೇಳಿಕೆಗಳಲ್ಲಿ ಅಸ್ಪಷ್ಟತೆಯನ್ನು ಗುರುತಿಸಿದ್ದಾರೆ. ಆತ ತನಿಖಾಧಿಕಾರಿಗಳನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತನ್ನ ಮುಖಕ್ಕೆ ಆದ ಗಾಯಗಳು ಮತ್ತು ಕೊಲೆ ನಡೆದ ಸಮಯದಲ್ಲಿ ಆ ಸ್ಥಳದಲ್ಲಿ ಯಾಕಿದ್ದ ಎನ್ನುವುದಕ್ಕೆ ಯಾವುದೇ ಸಮರ್ಪಕ ಕಾರಣ ನೀಡಿಲ್ಲ ಎಂದು ಅವರು ಹೇಳಿದ್ದಾರೆ.
ಆ.9ರಂದು ಕೋಲ್ಕತ್ತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್ನಲ್ಲಿ ಅತ್ಯಾಚಾರಕ್ಕೊಳಗಾಗಿ ಅರೆಬೆತ್ತಲೆ ಸ್ಥಿತಿಯಲ್ಲಿ 31 ವರ್ಷದ ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಸಂಜಯ್ ರಾಯ್ನನ್ನು ಆ.10ರಂದು ಕೋಲ್ಕತಾ ಪೊಲೀಸರು ಬಂಧಿಸಿದ್ದರು.
ಸಿಸಿಟಿವಿ ಕ್ಯಾಮೆರಾದಲ್ಲಿ ಸಂಜಯ್ ರಾಯ್ ಸೆಮಿನಾರ್ ಹಾಲ್ಗೆ ಪ್ರವೇಶಿಸುತ್ತಿರುವುದು ಕಂಡು ಬಂದಿತ್ತು. ಅಲ್ಲದೆ ಶವದ ಬಳಿ ಆತನ ಬ್ಲೂಟೂತ್ ಸಾಧನವು ಪತ್ತೆಯಾಗಿತ್ತು. ಇದೇ ಕಾರಣಕ್ಕೆ ರಾಯ್ನನ್ನು ಪೊಲೀಸರು ಬಂಽಧಿಸಿದ್ದರು. ಸದ್ಯ ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ.