Thursday, September 19, 2024
Homeರಾಜ್ಯಕಾರಾಗೃಹದಲ್ಲಿ ನಟ ದರ್ಶನ್‌ಗೆ ರಾಜ್ಯಾತಿಥ್ಯ, ಜೈಲರ್ ಸೇರಿ 7 ಅಧಿಕಾರಿಗಳು ಅಮಾನತು

ಕಾರಾಗೃಹದಲ್ಲಿ ನಟ ದರ್ಶನ್‌ಗೆ ರಾಜ್ಯಾತಿಥ್ಯ, ಜೈಲರ್ ಸೇರಿ 7 ಅಧಿಕಾರಿಗಳು ಅಮಾನತು

Actor Darshan's viral pics: 7 Bengaluru central prison officials including jailer suspended

ಬೆಂಗಳೂರು,ಆ.26- ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌ಗೆ ರಾಜ್ಯಾತಿಥ್ಯ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೈಲಿನ ಏಳು ಮಂದಿಯನ್ನು ಅಮಾನತುಗೊಳಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಹಿರಿಯ ಅಧಿಕಾರಿಗಳು ಶಾಮೀಲಾಗಿದ್ದರೆ ಅವರನ್ನೂ ಅಮಾನತುಗೊಳಿಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೋಟೋ, ವಿಡಿಯೋಗಳು ಬಹಿರಂಗಗೊಂಡ ಬೆನ್ನಲ್ಲೇ ದರ್ಶನ್‌ ಅವರನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.

ನಿನ್ನೆ ಸಂಜೆ 4.30ರ ವೇಳೆಗೆ ತಮಗೆ ಈ ಬಗ್ಗೆ ಮಾಹಿತಿ ಬಂತು. ತಕ್ಷಣವೇ ಬಂಧಿಖಾನೆಯ ಡಿಜಿಪಿ ಅವರೊಂದಿಗೆ ಸಮಾಲೋಚನೆ ನಡೆಸಿ ರಾತ್ರಿ 1.30ರವರೆಗೂ ಪರಿಶೀಲನೆ ನಡೆಸಿದ್ದೇವೆ. ನಂತರ ಜೈಲರ್‌ಗಳಾದ ಶರಣಬಸವ, ಅಮೀನ್‌ಗಢ, ಪ್ರಭು.ಎಸ್‌‍ ಕಂದೇವಾಡ್‌, ಸಹಾಯಕ ಜೈಲಾಧಿಕಾರಿಗಳಾದ ಎಲ್‌.ಎಸ್‌‍ತಿಪ್ಪೇಸ್ವಾಮಿ, ಶ್ರೀಕಾಂತ್‌ ತಳ್ವಾರ್‌, ಹೆಡ್‌ ವಾರ್ಡನ್‌ಗಳಾದ ವೆಂಕಪ್ಪ, ಸಂಪತ್‌ಕುಮಾರ್‌ ಕಡಪಟ್ಟಿ, ವಾರ್ಡನ್‌ ಬಸಪ್ಪ ತೇಲಿ ಅವರನ್ನು ಅಮಾನತುಗೊಳಿಸಲಾಗಿದೆ.

ದರ್ಶನ್‌ಗೆ ನಿಯಮ ಮೀರಿ ಆತಿಥ್ಯ ನೀಡಿದ ಬಗ್ಗೆ ವರದಿ ಕೇಳಲಾಗಿದೆ. ಡಿಜಿಪಿಯವರು ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಕರ್ತವ್ಯ ಲೋಪವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆ. ಹಿರಿಯ ಅಧಿಕಾರಿಗಳನ್ನು ಅಲ್ಲಿಂದ ವರ್ಗಾವಣೆ ಮಾಡಲಾಗಿದೆ. ಪರಪ್ಪನ ಅಗ್ರಹಾರ ಮಾತ್ರವಲ್ಲ ರಾಜ್ಯದ ಯಾವುದೇ ಜೈಲಿನಲ್ಲೂ ಈ ರೀತಿಯ ಘಟನೆಗಳು ಆಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು.

ಜೈಲಿನಲ್ಲಿರುವ ದರ್ಶನ್‌ಗೆ ಜೈಲಿನ ನಿಯಮಾವಳಿಗಳ ಪ್ರಕಾರವೇ ಸೌಲಭ್ಯಗಳನ್ನು ಒದಗಿಸಬೇಕು. ಅದನ್ನು ಹೊರತುಪಡಿಸಿ ಹೆಚ್ಚುವರಿ ಸೌಲಭ್ಯ ನೀಡಬಾರದೆಂದು ಈ ಮೊದಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಅದರ ಹೊರತಾಗಿಯೂ ಈಗ ದರ್ಶನ್‌ ಜೈಲಿನಲ್ಲೇ ಸಿಗರೇಟ್‌ ಸೇದುತ್ತಿರುವ ಹಾಗೂ ಟೀ ಕುಡಿಯುತ್ತಿರುವ ಫೋಟೋಗಳು ಬಹಿರಂಗಗೊಂಡಿವೆ. ಅದೇ ರೀತಿ ವಿಡಿಯೋ ಕಾಲ್‌ ಮಾಡಿರುವ ವಿಡಿಯೋ ಕೂಡ ಹರಿದಾಡುತ್ತಿದೆ. ಈ ನಿಟ್ಟಿನಲ್ಲಿ ತನಿಖೆಗೆ ಆದೇಶಿಸಲಾಗಿದೆ ಎಂದರು.

ಘಟನೆಯನ್ನು ನಾವು ಸಮರ್ಥಿಸಿಕೊಳ್ಳುತ್ತಿಲ್ಲ. ದರ್ಶನ್‌ ಪ್ರಕರಣದಲ್ಲಿ ತಮ ಮೇಲೆ ಯಾವ ಒತ್ತಡವೂ ಇಲ್ಲ. ನನ್ನ ಮಟ್ಟದವರೆಗೂ ತಲುಪಲು ಯಾರಿಗೂ ಸಾಧ್ಯವಿಲ್ಲ. ಯಾರ ಒತ್ತಡಗಳಿಗೂ ತಾವು ಮಣಿಯುವುದಿಲ್ಲ. ಸರ್ಕಾರಕ್ಕೆ ಯಾವ ಮುಜುಗರ ಇಲ್ಲ. ಆಗಿರುವ ಲೋಪಗಳನ್ನು ಸರಿಪಡಿಸುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು.
ಜೈಲಿನಲ್ಲಿ ದಿನದ 24 ಗಂಟೆ ಹಾಗೂ ವಾರಪೂರ್ತಿ ನಿಗಾವಹಿಸಲಾಗುತ್ತಿದೆ.

ಅದರ ನಡುವೆಯೂ ಈ ರೀತಿಯ ಘಟನೆಗಳು ನಡೆದಿವೆ ಎಂದಾದರೆ ಅದನ್ನು ಹಿರಿಯ ಅಧಿಕಾರಿಗಳು ಗಮನಿಸಬೇಕಿತ್ತು. ಅಲ್ಲಿ ಲೋಪವಾಗಿದೆ. ಹೀಗಾಗಿ ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಸಲಾಗುತ್ತಿದೆ. ಹಿರಿಯ ಅಧಿಕಾರಿಗಳ ಪಾತ್ರ ಇದ್ದರೆ ಅವರನ್ನು ಅಮಾನತುಗೊಳಿಸಲಾಗುವುದು ಎಂದು ತಿಳಿಸಿದರು.

ಹಿರಿಯ ಅಧಿಕಾರಿಗಳನ್ನು ರಕ್ಷಿಸಿ ಕಿರಿಯರನ್ನು ಶಿಕ್ಷಿಸುವ ಸಂದರ್ಭಗಳಿಲ್ಲ. ಈ ಮೊದಲು ದರ್ಶನ್‌ಗೆ ಚಿಕನ್‌ ಬಿರಿಯಾನಿ ಕೊಟ್ಟಿದ್ದಾರೆ ಎಂಬ ಆರೋಪಗಳು ಬಂದವು. ಆಗ ನಾವು ಪರಿಶೀಲನೆ ನಡೆಸಿದಾಗ ಅಂತಹ ಯಾವುದೇ ಘಟನೆಗಳು ನಡೆದಿರಲಿಲ್ಲ. ಆ ವೇಳೆಯಲ್ಲೇ ಜೈಲಿನ ಮ್ಯಾನ್ಯುಲ್‌ ಹೊರತುಪಡಿಸಿ ಹೆಚ್ಚುವರಿ ಸೌಲಭ್ಯ ನೀಡಬಾರದೆಂದು ಸೂಚಿಸಿದ್ದೆವು ಎಂದು ಹೇಳಿದರು.

ಜೈಲಿನಲ್ಲಿ ಮೊಬೈಲ್‌ ಬಳಕೆ ಮಾಡಿ ವಿಡಿಯೋ ಕಾಲ್‌ ಮಾಡಿದ್ದು ಯಾರು?, ಫೋಟೋ ತೆಗೆದಿದ್ದು ಯಾರು? ಫೋಟೋಗಳು ಹೇಗೆ ಹೊರಗೆ ಬಂದವು? ಮೊಬೈಲ್‌ ಒಳಗೆ ಹೋಗಿದ್ದು ಹೇಗೆ ಎಂಬೆಲ್ಲ ವಿಚಾರಗಳು ತನಿಖೆಯಾಗಲಿವೆ. ಈಗ ಘಟನೆಯಂತೂ ಆಗಿದೆ. ಈ ಮೊದಲು ಅಲ್ಲಿ ಹೈ ಫ್ರೀಕ್ವೆನ್ಸಿ ಜಾಮರ್‌ ಅಳವಡಿಸಲಾಗಿತ್ತು. ಆದರೆ ಅದರಿಂದ ಅಕ್ಕಪಕ್ಕದವರಿಗೆ ತೊಂದರೆಯಾಗುತ್ತಿದೆ ಎಂಬ ಕಾರಣಕ್ಕೆ ಜಾಮರ್‌ನ ಫ್ರೀಕ್ವೆನ್ಸಿಯನ್ನು ಕಡಿಮೆ ಮಾಡಲಾಗಿದೆ ಎಂದು ತಿಳಿಸಿದರು.

ಜೈಲಿನ ಒಳಗೆ ಎಲ್ಲರಿಗೂ ಹೋಗಲು ಅವಕಾಶ ನೀಡುವುದಿಲ್ಲ. ದರ್ಶನ್‌ ಭೇಟಿಗೂ ಮಾರ್ಗಸೂಚಿಗಳ ಅನ್ವಯ ನಿರ್ಬಂಧಗಳಿವೆ. ಈ ಮೊದಲು ಜೈಲಿನಲ್ಲಿ ಕೆಲವು ಆಕ್ಷೇಪಾರ್ಹ ವಸ್ತುಗಳು ದೊರೆಯುತ್ತಿವೆ ಎಂದು ಆರೋಪಗಳು ಬಂದಾಗ ಸಿಸಿಬಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದರು. ಆಗ ಏನೂ ಸಿಕ್ಕಿರಲಿಲ್ಲ. ಇದರ ಬಗ್ಗೆ ಕೂಡ ತನಿಖೆ ನಡೆಸುತ್ತೇವೆ. ಜೈಲಿನಲ್ಲಿ ಮೂರು ದಿನಗಳ ಹಿಂದಿನವರೆಗೂ ಸಿಸಿಟಿವಿಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ. ಮಾಹಿತಿ ಸೋರಿಕೆ ಆಗಿತ್ತೇ? ಆಕ್ಷೇಪಾರ್ಹ ವಸ್ತುಗಳನ್ನು ಅಲ್ಲಿಂದ ಸ್ಥಳಾಂತರ ಮಾಡಲಾಗಿತ್ತೇ ಎಂಬೆಲ್ಲ ವಿಚಾರಗಳ ಬಗ್ಗೆ ತನಿಖೆ ನಡೆಯಲಿದೆ ಎಂದರು.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಸಡಿಲಗೊಳ್ಳಲು ಬಿಡುವುದಿಲ್ಲ. ಜೈಲಿನಲ್ಲಿ ಮುಂದೆ ಈ ರೀತಿಯ ಬೆಳವಣಿಗೆಗಳಾಗದಂತೆ ಎಚ್ಚರಿಕೆ ವಹಿಸುತ್ತೇವೆ. ಕೊಲೆ ಪ್ರಕರಣದ ದೋಷಾರೋಪ ಪಟ್ಟಿಯ ಬಗ್ಗೆ ಯಾವುದೇ ಅನುಮಾನ ಇಟ್ಟುಕೊಳ್ಳುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಈ ಹಿಂದೆ ಹಳೆಯ ಪ್ರಕರಣದಲ್ಲಿ ದರ್ಶನ್‌ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಪರಿಶೀಲನೆ ನಡೆಯಲಿದೆ. ಅಗತ್ಯ ಬಿದ್ದರೆ ಪ್ರಕರಣವನ್ನು ದಾಖಲಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ದರ್ಶನ್‌ ಅವರನ್ನು ಆತಿಥ್ಯ ಸಿಗದೇ ಇರುವ ಕಡೆಗೆ ಸ್ಥಳಾಂತರದ ಕುರಿತು ಪರಿಶೀಲನೆ ನಡೆಸಲಾಗುವುದು. ಪ್ರಕರಣದಲ್ಲಿ ಯಾವುದನ್ನು ಮರೆಮಾಚುವ ಅಥವಾ ಸುಳ್ಳು ಮಾಹಿತಿ ನೀಡುವ ಅಗತ್ಯ ತಮಗಿಲ್ಲ ಎಂದು ಪರಮೇಶ್ವರ್‌ ಸ್ಪಷ್ಟನೆ ನೀಡಿದರು.

RELATED ARTICLES

Latest News