ಬೆಂಗಳೂರು, ಆ.29– ಉತ್ತರ ಬಂಗಾಳ ಕೊಲ್ಲಿ ಮತ್ತು ಪೂರ್ವ ಮಧ್ಯ ಸಮುದ್ರಗಳಲ್ಲಿ ಕಡಿಮೆ ಒತ್ತಡ ಪ್ರದೇಶವು ರೂಪುಗೊಳ್ಳುವ ಸಾಧ್ಯತೆ ಇರುವುದರಿಂದ ರಾಜ್ಯದಲ್ಲಿ ನಾಳೆಯವರೆಗೆ ಸಾಧಾರಣ ಮಳೆ ಯಾಗುವ ಮುನ್ಸೂಚನೆಗಳಿವೆ.
ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಮೇಲೆ ಹೆಚ್ಚಿನ ರೀತಿ ಉಂಟಾಗುವುದಿಲ್ಲ. ಆದರೂ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಕಡಿಮೆ ಒತ್ತಡದ ಪ್ರದೇಶದಿಂದಾಗಿ ಮಳೆಯ ಮಾರುತಗಳು ಎರಡು ದಿನಗಳಲ್ಲಿ ದಕ್ಷಿಣ ಒಡಿಶಾ ಮತ್ತು ಆಂದ್ರಪ್ರದೇಶದ ಉತ್ತರ ಕರಾವಳಿಯಿಂದ ಪಶ್ಚಿಮ-ವಾಯುವ್ಯ ದಿಕ್ಕಿನ ಕಡೆಗೆ ಚಲಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹೀಗಾಗಿ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ನಾಳೆಯವರೆಗೆ, ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ. ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಆಗಾಗ್ಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.
ಶನಿವಾರದಿಂದ ಮಳೆ ತೀವ್ರತೆ ಈ ಭಾಗದಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಆಧರಿಸಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.ರಾಜ್ಯದ ಕರಾವಳಿ ಮತ್ತು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಚದುರಿಂತೆ ವ್ಯಾಪಕವಾಗಿ ಸಾಧಾರಣ ಮಳೆಯಾಗಲಿದ್ದು, ಕೆಲವೆಡೆ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.
ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದೆ. ವಾಯುಭಾರ ಕುಸಿತದ ಪ್ರಭಾವದಿಂದ ಆಗಸ್ಟ್ 30 ರಿಂದ ಸೆಪ್ಟೆಂಬರ್ 3 ರವರೆಗೆ ಉತ್ತರ ಒಳನಾಡಿನ ಬೀದರ್, ಕಲಬುರಗಿ ಜಿಲ್ಲೆಗಳಿಗೆ ಹೊಂದಿಕೊಂಡ ಪ್ರದೇಶಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೆ, ಕೆಲವೆಡೆ ಭಾರಿ ಮತ್ತು ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.