ರಾಂಚಿ,ಆ.30- ಜಾರ್ಖಂಡ್‌ನ ಹೇಮಂತ್ ಸೊರೆನ್ ಸರ್ಕಾರದಲ್ಲಿ ಜೆಎಂಎಂ ಶಾಸಕ ರಾಮದಾಸ್ ಸೊರೆನ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ರಾಮದಾಸ್ ಸೊರೆನ್ ಅವರನ್ನು ನಿಯೋಜನೆ ಮಾಡಲಾಗಿದೆ.
ಮುಖ್ಯಮಂತ್ರಿ ಹೇಮಂತ್ ಸೊರೆನ್, ಜೆಎಂಎಂ ನೇತತ್ವದ ಮೈತ್ರಿಕೂಟದ ಹಿರಿಯ ನಾಯಕರು ಮತ್ತು ಹಲವಾರು ಸರ್ಕಾರಿ ಅಧಿಕಾರಿಗಳ ಸಮುಖದಲ್ಲಿ ಇಲ್ಲಿನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಅವರು ರಾಮದಾಸ್ ಸೊರೆನ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ಜೆಎಂಎಂ ಪಕ್ಷ ತೊರೆದಿರುವ ಚಂಪೈ ಸೊರೆನ್ ಇಂದು ಮಧ್ಯಾಹ್ನ ಬಿಜೆಪಿ ಸೇರಲಿದ್ದಾರೆ ಎಂದು ತಿಳಿದುಬಂದಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗುವ ಮೊದಲು ಹೇಮಂತ್ ಸೊರೆನ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಸ್ವಲ್ಪ ಸಮಯದ ನಂತರ ಚಂಪೈ ಸೊರೆನ್ ಫೆಬ್ರವರಿ 2 ರಂದು ಜಾರ್ಖಂಡ್ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದರು.
ಹೇಮಂತ್ ಸೊರೆನ್ ಅವರು ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಜುಲೈ 4 ರಂದು ಮತ್ತೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದಾಗ ಚಂಪೈ ತಮ ಸ್ಥಾನ ಬಿಟ್ಟುಕೊಟ್ಟಿದ್ದರು.